ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದ ಮೂವರ ಬಂಧನ ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದ ಮೂವರು ಆರೋಪಿಗಳನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವೆಂಕಟೇಶ್, ಧರಣೇಶ್ ಹಾಗೂ ಸಿದ್ದಾರ್ಥ್ ಎಂದು ಗುರುತಿಸಲಾಗಿದೆ.
ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಅದರ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರಿಗೆ ಅಗೌರವ ತರುವಂತಹ ಹೇಳಿಕೆಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶತಭಾಷ್ ಶಿವಣ್ಣ ಕಳೆದ ಫೆಬ್ರವರಿಯಲ್ಲಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರಿಗೂ ದೂರು ಸಲ್ಲಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು.
ದೂರಿನನ್ವಯ ಐಟಿ ಆ್ಯಕ್ಟ್ ಹಾಗೂ ಐಪಿಸಿ ಸೆಕ್ಷನ್ನಡಿ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರ್ ಕ್ರೈಂ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಅವರಲ್ಲಿ ಮೂವರ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದ್ದು, ಠಾಣಾ ಜಾಮೀನಿನ ಆಧಾರದಲ್ಲಿ ನೋಟಿಸ್ ನೀಡಿ ಕಳಿಸಲಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.
ಕಮಿಷನ್ ಆರೋಪ ಪ್ರತಿಪಕ್ಷಗಳ ಕುತಂತ್ರ :ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶೇ.15 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಕೆಲ ಗುತ್ತಿಗೆದಾರರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಇದು ಪ್ರತಿ ಪಕ್ಷಗಳ ಕುತಂತ್ರ ಎಂದು ಗುತ್ತಿಗೆದಾರರೂ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಎಸ್. ಬಾಲರಾಜೇಗೌಡ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರು ದೇಶದಲ್ಲಿಯೇ ಅತ್ಯಂತ ಶ್ರೀಮಂತ ಶಾಸಕರು ಎಂಬುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಅವರು ಗುತ್ತಿಗೆದಾರರಿಂದ ಶೇ.15 ರಷ್ಟು ಕಮಿಷನ್ ಕೇಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಕೆಲ ಗುತ್ತಿಗೆದಾರರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೊಂದಿಗೆ ಕೈಜೋಡಿಸಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸೋಲಿನಿಂದ ಬಿಜೆಪಿಗೆ ಹತಾಶೆ :ಬಿಜೆಪಿ ಪಕ್ಷದವರು ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಹತಾಶೆಯಾಗಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಹಗಲು ಕನಸು ಕಾಣುತ್ತಿದ್ದಾರೆ. ಅವರ ಅವಧಿಯಲ್ಲಿದ್ದ ಗುತ್ತಿಗೆದಾರರು ಮಾಡಿರುವ ಆರೋಪಗಳನ್ನು ಕೆಲ ಗುತ್ತಿಗೆದಾರರನ್ನು ಬಳಕೆ ಮಾಡಿಕೊಂಡು ಆರೋಪಗಳ ಸುರಿ ಮಳೆಗೈಯುತ್ತಿದ್ದಾರೆ. ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದರು.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಬಿಲ್ಗಳನ್ನು ಈವರೆಗೂ ಬಾಕಿ ಉಳಿಸಿಕೊಂಡಿತ್ತು. ಇದೀಗ ಆ ಕಾಮಗಾರಿಗಳ ಕುರಿತು ತನಿಖೆ ನಡೆಸುತ್ತಿದ್ದು, ಮುಂದಿನ 20 ದಿನಗಳಲ್ಲಿ ಪ್ರಾಮಾಣಿಕ ಮತ್ತು ಗುಣಮಟ್ಟ ಹೊಂದಿರುವ ಎಲ್ಲ ಗುತ್ತಿಗೆಗಳ ಹಣ ಬಿಡುಗಡೆಯಾಗಲಿದೆ. ಆದರೆ, ಶೇ.40 ರಷ್ಟು ಲಂಚ ನೀಡಿ ಕಳಪೆ ಕಾಮಗಾರಿಗಳನ್ನು ನಡೆಸಿರುವ ಬಿಲ್ಗಳನ್ನು ಮಾತ್ರ ಬಾಕಿ ಉಳಿಸಿಕೊಳ್ಳಲಿದೆ ಎಂದು ತಿಳಿಸಿದರು. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಬಂದು ಇನ್ನೂ ಎರಡು ತಿಂಗಳು ಮುಗಿದಿಲ್ಲ. ಈವರೆಗೂ ಯಾವುದೇ ಗುತ್ತಿಗೆಯನ್ನೂ ನೀಡಿಲ್ಲ. ಆದರೂ, ಲಂಚ ಕೇಳಲಾಗುತ್ತಿದೆ ಎಂದು ಹೇಳುವ ಆರೋಪ ನಿರಾಧಾರ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದ ಗುತ್ತಿಗೆದಾರನಿಗೆ ಹಣ :ಕಾಮಗಾರಿಯಲ್ಲಿ ಡಬಲ್ ಬಿಲ್ ಮತ್ತು ಕಾಮಗಾರಿ ನಡೆಸದೇ ಬಿಲ್ ಪಾವತಿ ಮತ್ತು ಟೆಂಡರ್ ಕರೆದು ಎರಡು ದಿನದಲ್ಲಿ ವರ್ಕ್ ಆರ್ಡರ್, 15 ದಿನದಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಇಷ್ಟೆಲ್ಲ ಹಗರಣ ನಡೆದಿದೆ. ಹಲವಾರು ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಪೋಲಾಗುವುದು ತಪ್ಪಿಸಲು ಮತ್ತು ಕಾಮಗಾರಿಗಳನ್ನು ಸಂಪೂರ್ಣ ತನಿಖೆ ಮಾಡಿ ಗುಣಮಟ್ಟದ ಕಾಮಗಾರಿಗಳನ್ನು ಮಾಡಿದ ಪ್ರಾಮಾಣಿಕ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಲು ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಈಗಾಗಲೇ ತನಿಖೆ ಮಾಡಲು ಸಮಿತಿ ಮಾಡಲಾಗಿದೆ. ಪಾರದರ್ಶಕವಾಗಿ ತನಿಖೆ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಬಿಲ್ಲು ಪಾವತಿಯಾಗುತ್ತದೆ. ಕಳಪೆ ಕಾಮಗಾರಿ, ಕಳ್ಳಾಟ ಆಡಿರುವ ಗುತ್ತಿಗೆದಾರ ಅಧಿಕಾರಿಗಳ ವಿರುದ್ದ ಕ್ರಮವಾಗುತ್ತದೆ. ಪ್ರಾಮಾಣಿಕ ಕೆಲಸ ಮಾಡಿರುವ ಗುತ್ತಿಗೆದಾರನಿಗೆ ಹಣ ಪಾವತಿಯಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳು ನಾಡಿನ ಸಮಸ್ತ ಜನರಿಗೆ ಯಶಸ್ವಿಯಾಗಿ ಯೋಜನೆ ಜಾರಿಗೆ ಬಂದಿದೆ. ಇಂತಹ ಒಳ್ಳೆಯ ಆಡಳಿತಕ್ಕೆ ನಾಡಿನ ಜನರ ಅಪಾರ ಬೆಂಬಲ ವ್ಯಕ್ತವಾಗಿರುವುದನ್ನು ಕಂಡು ಬಿಜೆಪಿ ಪಕ್ಷ ನಾಯಕರುಗಳು ಹತಾಶರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಖಚಿತ ಎಂದು ಮನಗಂಡಿರುವ ಬಿಜೆಪಿ ಪಕ್ಷದವರು ವಾಮಾಮಾರ್ಗ, ಷಡ್ಯಂತ್ರ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಂಜುನಾಥ್ ಹೆಚ್.ರಾಮಮೂರ್ತಿ, ನಾಗರಾಜ್, ವಾರ್ಡ್ ಅಧ್ಯಕ್ಷರಾದ ಶೈಲೇಶ್, ಮಂಜುನಾಥಗೌಡ, ಗಂಗಾಧರ್ ಭೀಮೇಶ್ ಮತ್ತಿತರು ಉಪಸ್ಥಿತರಿದ್ದರು.
ಇದನ್ನೂ ಓದಿ :ಗುತ್ತಿಗೆದಾರರ ಬಿಲ್ ಬಾಕಿ - ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ: ಸಿಎಂ ಸಿದ್ದರಾಮಯ್ಯ