ಬೆಂಗಳೂರು: ಶಾಲಾ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ಮತ್ತು ಸಮವಸ್ತ್ರ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ. ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕೆಂದು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹೊಂದುವುದು ಅಗತ್ಯವಾಗಿದೆ. ಎಲ್ಲ ಜಾತಿ - ಧರ್ಮದವರು ಆದೇಶ ಅನ್ವಯದ ಪಾಲಿಸಬೇಕು. ಈ ಆದೇಶದ ಅನುಷ್ಠಾನದ ಸಂದರ್ಭದಲ್ಲಿ ಎಲ್ಲ ಮಕ್ಕಳು, ಪಾಲಕರು, ಶಿಕ್ಷಕರು ಸಹಕಾರ ನೀಡಬೇಕು. ಶಿಕ್ಷಣವನ್ನು ಮಕ್ಕಳಿಗೆ ಕೊಡಲು ನೆರವು ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ತರಗತಿಯನ್ನು ಬಹಿಷ್ಕರಿಸುವ ಕುರಿತಂತೆಯೂ ಪ್ರತಿಕ್ರಿಯಿಸಿದ ಅವರು, ಮಕ್ಕಳು ಹೈಕೋರ್ಟ್ ಆಜ್ಞೆ ಪಾಲನೆ ಮಾಡಬೇಕು. ಎಲ್ಲ ವಿದ್ಯಾರ್ಥಿಗಳು ತರಗತಿ ಮತ್ತು ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ: 'ಹಿಜಾಬ್' ತೀರ್ಪಿನ ಸಿಎಂ ಪ್ರತಿಕ್ರಿಯೆ ಸರ್ಕಾರದ ಪರ ತೀರ್ಪು: ಶಾಲಾ-ಕಾಲೇಜಿನಲ್ಲಿ ಸಮವಸ್ತ್ರ ಬಗ್ಗೆ ಸರ್ಕಾರ ರೂಪಿಸಿದ ನಿಯಮದ ಪರವಾಗಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಆದೇಶ ನಮಗೆ ಸಂತೋಷ ಕೊಟ್ಟಿದೆ. ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ತೀರ್ಪನ್ನು ದೇಶ - ವಿದೇಶಗಳು ಗಮನಿಸುತ್ತಿದ್ದವು ಎಂದರು.
ಯಾವುದೇ ಧರ್ಮ, ಮತಾಂಧತೆ ಬೆಳೆಸಿಕೊಳ್ಳದೇ ಶಾಲೆಗಳಲ್ಲಿ ನಾವು ಅಣ್ಣ - ತಮ್ಮಂದಿರು, ಅಕ್ಕ- ತಂಗಿಯರಾಗಿದ್ದೇವೆ. ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರದಿಂದರಬೇಕು. ದೇಶದ ಪ್ರಜೆಗಳಾಗಿ ಹಾಗೂ ನಾಗರಿಕರಾಗಿ ಬದುಕುವುದರಿಂದ ದೇಶದ ಏಕತೆ ಹಾಗೂ ಸಮಗ್ರತೆ ಗಟ್ಟಿಗೊಳ್ಳುತ್ತದೆ. ಸಂಸ್ಕಾರ ನೀಡುವಲ್ಲಿ ಶಾಲೆಯ ಸಮವಸ್ತ್ರಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ನ್ಯಾಯಾಲಯದ ತೀರ್ಪನ್ನು ಪಾಲಿಸುವ ಮೂಲಕ ಶಾಂತಿ - ಸುವ್ಯವಸ್ಥೆ ಕಾಪಾಡಬೇಕು ಎಂದು ಗೃಹ ಸಚಿವ ಮನವಿ ಮಾಡಿದರು.
ಇದನ್ನೂ ಓದಿ:ಹಿಜಾಬ್ ಕುರಿತ ತೀರ್ಪು: ಮುಂದಿನ ಕಾನೂನು ಹೋರಾಟದ ಬಗ್ಗೆ ಅರ್ಜಿದಾರರ ಪರ ವಕೀಲರು ಹೇಳಿದ್ದೇನು?