ಇದುವರೆಗೂ ಕೊರೊನಾ ಪಾಸಿಟಿವ್ ಬಂದಿಲ್ಲ, ಆತಂಕ ಬೇಡ: ಸಚಿವ ಡಾ.ಸುಧಾಕರ್
ಇದುವರೆಗೂ ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ಪಾಸಿಟಿವ್ ಬಂದಿಲ್ಲ ಎಲ್ಲಾ ರಿಪೋರ್ಟ್ಗಳಲ್ಲೂ ನೆಗೆಟಿವ್ ಅಂತ ವರದಿ ಬಂದಿದ್ದು ರೋಗದ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಇಂದು ಮೂವರನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಡಾ.ಸುಧಾಕರ್
ಬೆಂಗಳೂರು: ಇದುವರೆಗೂ ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿಲ್ಲ. ಎಲ್ಲಾ ರಿಪೋರ್ಟ್ಗಳಲ್ಲೂ ನೆಗೆಟಿವ್ ಅಂತ ವರದಿ ಬಂದಿದ್ದು ರೋಗದ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಇಂದು ಮೂವರನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49,594 ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಕಾರವಾರ ಮತ್ತು ಮಂಗಳೂರಿನಲ್ಲಿ 5147 ಜನರ ತಪಾಸಣೆ ನಡೆಸಿದ್ದು, 236 ಜನರನ್ನು ಪ್ರತ್ಯೇಕವಾಗಿ ಇಟ್ಟು ತಪಾಸಣೆ ಮಾಡಲಾಗಿದೆ. ಅವರೆಲ್ಲರಲ್ಲಿಯೂ ಕೊರೊನಾ ನೆಗೆಟಿವ್ ಅಂತಾ ಬಂದಿದೆ. ಇವತ್ತು ಮೂವರನ್ನು ಶಂಕೆ ಮೇಲೆ ಒಳರೋಗಿಗಳಾಗಿ ದಾಖಲಿಸಲಾಗಿದೆ, ರೋಗದ ಲಕ್ಷಣ ಇರೋದ್ರಿಂದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಆತಂಕ ಬೇಡ, ಚೀನಾದ 4 ಜನ ಪ್ರಯಾಣಿಕರು ಈಗಾಗಲೇ ವಾಪಸ್ ಅವರ ದೇಶಕ್ಕೆ ಹೋಗಿದ್ದಾರೆ ಎಂದರು. ಎಲ್ಲಿ ಜನದಟ್ಟಣೆ ಇದೆ ಅಲ್ಲಿ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಮಾಲ್ ಅಸೋಸಿಯೇಷನ್ ಮಾಲೀಕರನ್ನು ಕರೆದು ಅವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವೆ. ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಂಡಿದ್ದಾರೆ. ನಮ್ಮ ಅಧಿಕಾರಿಗಳು ಜಿಲ್ಲಾಧಿಕಾರಿಗಳ ತಂಡ ಇದನ್ನು ವ್ಯಾಪಕವಾಗಿ ಗಮನಿಸುತ್ತಿದೆ. ನನಗೆ ನಮ್ಮ ಅಧಿಕಾರಿಗಳಿಗೆ ತುಂಬಾ ಕರೆ ಬಂದಿದೆ, ರೋಗ ಲಕ್ಷಣ ಕಂಡ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕಾ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಅದರ ಅಗತ್ಯವಿಲ್ಲ ಕೊರೊನಾ ವೈರಾಣು ಹಾವಳಿ ಇರುವ 77 ದೇಶಗಳಲ್ಲಿ ಕಳೆದ 15 ದಿನದಲ್ಲಿ ಪ್ರಯಾಣ ಮಾಡಿ ನಮ್ಮ ರಾಜ್ಯಕ್ಕೆ ವಾಪಸ್ ಬಂದಿದ್ದರೆ ಅವರಲ್ಲಿ ಏನಾದರೂ ರೋಗದ ಲಕ್ಷಣಗಳು ಕಂಡುಬಂದಿದ್ದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.