ಕರ್ನಾಟಕ

karnataka

ETV Bharat / state

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ; ಸರ್ಕಾರದ ನಿರ್ಧಾರ ರದ್ದು ಕೋರಿದ್ದ ಅರ್ಜಿ ವಜಾ - green signal for the SSLC examination

ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸ್ಪೆಷಲ್ ಲೀವ್ ಪಿಟಿಷನ್ (ಎಸ್​ಎಲ್​ಪಿ) ಅನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಪರೀಕ್ಷೆಯ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದ ಸರ್ಕಾರದ ವಾದವನ್ನು ಪುರಸ್ಕರಿಸಿ ಪರೀಕ್ಷೆಗೆ ಅನುಮತಿ ನೀಡಿದೆ.

Supreme Court
ಸುಪ್ರೀಂ ಕೋರ್ಟ್

By

Published : Jun 17, 2020, 2:56 PM IST

ಬೆಂಗಳೂರು:ಕೊರೊನಾ ವೈರಸ್ ವ್ಯಾಪಿಸುತ್ತಿರುವ ಕಾರಣ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಪರೀಕ್ಷೆ ನಡೆಯುವ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದ ರಾಜ್ಯ ಸರ್ಕಾರದ ವಾದವನ್ನು ಪುರಸ್ಕರಿಸಿ ಪರೀಕ್ಷೆಗೆ ಅನುಮತಿ ನೀಡಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಆದ್ದರಿಂದ ಜೂನ್ 25ರಿಂದ ನಡೆಯಲಿರುವ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಕೋರಿ ಬೆಳಗಾವಿಯ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ರಾಜಶ್ರೀ ನಾಗರಾಜ್ ಸುಪ್ರೀಂಕೋರ್ಟ್​ಗೆ ಎಸ್​ಎಲ್​ಪಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್​ನ ನ್ಯಾ. ನಾಗೇಶ್ವರ ರಾವ್, ನ್ಯಾ. ಕೃಷ್ಣ ಮುರಾರಿ, ನ್ಯಾ.ಎಸ್.ರವೀಂದ್ರ ಭಟ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.‌

ಕೆಲಕಾಲ ಅರ್ಜಿದಾರರ ಪರ ವಕೀಲರು ಹಾಗೂ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ.ಕೆ ನಾವದಗಿ ಅವರ ವಾದ ಆಲಿಸಿದ ಪೀಠ, ಪರೀಕ್ಷೆ ನಡೆಸುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸುವುದು ಸೂಕ್ತವಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶ ಸೂಕ್ತವಾಗಿದೆ. ಹೀಗಾಗಿ ಅರ್ಜಿದಾರರು ಸಲ್ಲಿಸಿರುವ ಎಸ್​ಎಲ್​ಪಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಇದರಿಂದಾಗಿ ಎಸ್ಎಸ್ಎಲ್​​ಸಿ ಪರೀಕ್ಷೆಗಳು ನಿಗದಿತ ವೇಳಾ ಪಟ್ಟಿಯಂತೆ ನಡೆಯಲಿವೆ.

ಪ್ರಕರಣದ ಹಿನ್ನೆಲೆ:

ರಾಜ್ಯದಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ಜೂನ್ 25ರಿಂದ ಆರಂಭಗೊಳ್ಳಲಿರುವ ಎಸ್ಎಸ್​ಎಲ್​ಸಿ ಪರೀಕ್ಷೆಗಳನ್ನು ರದ್ದು ಪಡಿಸಬೇಕು. ಒಂದು ವೇಳೆ ಪರೀಕ್ಷೆ ನಡೆದಲ್ಲಿ ರಾಜ್ಯದ 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು. ಈ ವೇಳೆ ಕೊರೊನಾ ವೈರಸ್ ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಹೀಗಾಗಿ ಮಹಾರಾಷ್ಟ್ರ ಪಂಜಾಬ್ ಮತ್ತು ಮಧ್ಯಪ್ರದೇಶ ಸರ್ಕಾರಗಳ ರೀತಿಯಲ್ಲಿ ರಾಜ್ಯದಲ್ಲಿಯೂ ಎಸ್ಎಸ್​ಎಲ್​ಸಿ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರ, ಜೂನ್ 25ರಿಂದ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ನಡೆಸುವ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆರೋಗ್ಯ ತಪಾಸಣೆ ಮತ್ತು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿತ್ತು.

ABOUT THE AUTHOR

...view details