ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೆಂಗಳೂರು: ರಸ್ತೆ ಸಂಚಾರಕ್ಕೆ ಚಾಲನೆನೀಡಿ ತಿಂಗಳದೊಳಗೆ ರ‍್ಯಾಪಿಡ್ ರಸ್ತೆಯ ಕಾಂಕ್ರೀಟ್ ಬ್ಲಾಕ್‌ಗಳು ಬಿರುಕು ಬಿಟ್ಟಿದ್ದು ಸಂಚಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಅತಿ ಕಡಿಮೆ ಉದ್ದದ ರಸ್ತೆಗೆ ಒಟ್ಟು 250 ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಬಳಸಲಾಗಿದೆ. ಈ ಪೈಕಿ 8 ಸ್ಲಾಬ್‌ಗಳು ಈಗಾಗಲೇ ಬಿರುಕು ಬಿಟ್ಟಿವೆ. ಅದರಲ್ಲಿ 1 ಬ್ಲಾಕ್ಅಂತೂ ಸಂಪೂರ್ಣವಾಗಿ ಮುರಿದು ಹೋಗಿದೆ.
ವರದಿ ಬಂದ ಬಳಿಕ ಕ್ರಮ ಬಿಬಿಎಂಪಿ:ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ರ‍್ಯಾಪಿಡ್ ರಸ್ತೆ ಬಿರುಕು ಬಿಟ್ಟಿರುವ ಕುರಿತಾಗಿ ಐಐಎಸ್ಸಿ ತಜ್ಞರು ಪರಿಶೀಲನೆ ನಡೆಸಿ, ಈಗಾಗಲೇ ವರದಿ ಸಲ್ಲಿಸಿದ್ದಾರೆ. ಆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಯೋಗಿಕ ರಸ್ತೆ: ಪ್ರಿ ಕಾಸ್ಟ್ ತಂತ್ರಜ್ಞಾನದಡಿ ನಿರ್ಮಿಸುವ ರ‍್ಯಾಪಿಡ್ ರಸ್ತೆ ಇದು ಪ್ರಾಯೋಗಿಕ ರಸ್ತೆಯಾಗಿದ್ದು, ಬಿರುಕು ಬಿಡಲು ಕಾರಣ ಏನು ಮತ್ತು ಮುಂದೇನು ಮಾಡಬೇಕು ಎಂಬುದನ್ನು ಐಐಎಸ್ಸಿ ತಜ್ಞರು ವರದಿಯಲ್ಲಿ ತಿಳಿಸಲಿದ್ದಾರೆ. ಈ ರ‍್ಯಾಪಿಡ್ ರಸ್ತೆ ನಿರ್ಮಾಣ ಆರ್ಥಿಕವಾಗಿಯೂ ಕಾರ್ಯಸಾಧುವೆ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆ ದರ ನಿಗದಿ: ಅಷ್ಟು ದಪ್ಪ ಆಗಿರುವ ಪ್ರಿಕಾಸ್ಟ್ ಬೇಕೆ ಬೇಡವೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸ ಬೇಕಾಗುತ್ತದೆ. ಎಷ್ಟೂ ದರ ನಿಗದಿ ಆಗಲಿದೆ ಎಂಬುದನ್ನು ನೋಡಿಕೊಂಡು ಮುಂದುವರಿಯಬೇಕಾಗುತ್ತದೆ. ಲೋಕೋಪಯೋಗಿ ಇಲಾಖೆ ಎಸ್ಆರ್ವೂ ದರ ನಿಗದಿ ಮಾಡಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇಶದ ಪ್ರಥಮ ರ‍್ಯಾಪಿಡ್ ರಸ್ತೆ:ದೇಶದ ಪ್ರಥಮ ರ‍್ಯಾಪಿಡ್ ರಸ್ತೆ ಅಂತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಂಬಿಸಿತು. ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರ‍್ಯಾಪಿಡ್ ರಸ್ತೆಗೆ ಉದ್ಘಾಟನಾ ಭಾಗ್ಯ ಸಿಕ್ಕರೂ, ಕಳಪೆ ಕಾಮಗಾರಿಯಿಂದ ಮತ್ತೆ ವಾಹನ ಸವಾರರು ಪರದಾಡುವಂತಾಗಿದೆ. 337.5 ಮೀಟರ್ ರಸ್ತೆ ಪ್ರೀಕಾಸ್ಟ್ ಪೋಸ್ಟ್ ಟೆನ್ನನಿಂಗ್ ಪೇವ್‌ಮೆಂಟ್ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿದೆ.
ಕಳಪೆ ಕಾಮಗಾರಿ ಕಂಡು ನಾಗರಿಕರು ಕೆಂಡ:ಸದ್ಯ ಮೂರ್ನಾಲ್ಕು ಕಡೆಗಳಲ್ಲಿ ಬಿರುಕು ಬಿದ್ದಿರುವುದು ಕಂಡು ಬರುತ್ತಿದೆ . ಪ್ರೀಕಾಸ್ಟ್ ಪ್ಯಾನೆಲ್ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮಿಶ್ರಣ ಬಳಕೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕ್ಷೀಪ್ರವಾಗಿ ರಸ್ತೆ ಕಾಮಗಾರಿ ಮುಗಿದಿದೆ ಅನ್ನುವದರ ಸಂತಸದಲ್ಲಿದ್ದ ನಾಗರಿಕರು ಕಳಪೆ ಕಾಮಗಾರಿ ಕಂಡು ಈಗ ಕೆಂಡಕಾರುವಂತಾಗಿದೆ.
ವರದಿ ಆಧಾರದ ಮೇಲೆ ನಿರ್ಧಾರ: ರ‍್ಯಾಪಿಡ್ ರಸ್ತೆಯನ್ನು ಉದ್ಘಾಟಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ್ದರು. ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗುವ ರ‍್ಯಾಪಿಡ್ ರಸ್ತೆಗಳನ್ನು ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು. ವೈಟ್ ಟಾಪಿಂಗ್ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯುವುದು ಕಷ್ಟದ ಕೆಲಸ. ಅದಕ್ಕೆಂದೇ ರ‍್ಯಾಪಿಡ್ ರಸ್ತೆ ತಂತ್ರಜ್ಞಾನ ಬಂದಿದೆ. ಮೊದಲಿಗೆ ಈ ರಸ್ತೆಯಲ್ಲಿ 20 ಟನ್‌ಗೂ ಅಧಿಕ ಭಾರದ ವಾಹನಗಳನ್ನು ಓಡಾಡಲು ಬಿಟ್ಟು ನೋಡೋಣ. ರಸ್ತೆಯ ಮೇಲೆ ಆಗುವ ಪರಿಣಾಮಗಳನ್ನು ಪರಿಶೀಲಿಸೋಣ. ಈ ವರದಿಯ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದಿದ್ದರು.
ನೂರಾರು ವರ್ಷ ಬಾಳಿಕೆಯ ಭರವಸೆ: ಪ್ರಿ ಕಾಸ್ಟ್ ತಂತ್ರಜ್ಞಾನದ ರ‍್ಯಾಪಿಡ್ ರಸ್ತೆಯನ್ನು ಸಿದ್ಧಗೊಳಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಈ ರಸ್ತೆ ಮೂರು ದಿನಗಳಲ್ಲಿ ನಿರ್ಮಾಣಗೊಳ್ಳುತ್ತದೆ, ನೂರು ವರ್ಷ ಬಾಳಿಕೆ ಬರುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಪ್ರಾಯೋಗಿಕವಾಗಿ ನಿರ್ಮಿಸಿದ್ದ ರ‍್ಯಾಪಿಡ್ ರಸ್ತೆ ಬಿರುಕು ಬಿಡುತ್ತಿರುವುದು ಮತ್ತೆ ಬಿಬಿಎಂಪಿ ವಿರುದ್ಧ ಕಳಪೆ ಕಾಮಗಾರಿ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂಓದಿ:ಕಾರವಾರ ಸುರಂಗ ಮಾರ್ಗ ಲೋಕಾರ್ಪಣೆ: ಏಕಮುಖ ಸಂಚಾರದಿಂದ ಅಪಘಾತ ಹೆಚ್ಚಳ ಆತಂಕ