ಬೆಂಗಳೂರು: ಹೊಸ ಪಾರ್ಲಿಮೆಂಟ್ ಭವನವು ನಮ್ಮ ಹೆಮ್ಮೆಯ ಕಟ್ಟಡ. ಹೊಸ ತಂತ್ರಜ್ಞಾನಕ್ಕೆ ಉದಾಹರಣೆ ಇದಾಗಿದೆ. ಭಾರತದ ಸಂಸ್ಕೃತಿಯ ಅತ್ಯುತ್ತಮ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜದಂಡ (ಸೆಂಗೋಲ್) ಪ್ರತಿಷ್ಠಾಪನೆಯೂ ಆಗಿದೆ, ಸೆಂಗೋಲ್ ಇದೆಯೆಂದು ಹೆಚ್ಚು ಜನರಿಗೆ ತಿಳಿದಿರಲಿಲ್ಲ, ಆದರೆ, ಮೋದಿ ಸೆಂಗೋಲ್ ಮೂಲಕ ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆಯನ್ನು ಮೂಡಿಸಿದ್ದಾರೆ ಎಂದರು.
ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತ ಸರ್ಕಾರದ ತಮ್ಮದೆಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ. 9 ವರ್ಷಗಳಲ್ಲಿ ಅಭಿವೃದ್ಧಿಯ ಭಾರಿ ಸಾಹಸವನ್ನು ಸಾಕಾರಗೊಳಿಸಿದ್ದಾರೆ. ನಿರಂತರ ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದಾಗಿತ್ತು, ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು ಎಂದರು.
ಭಾರತ ದೂರದೃಷ್ಟಿ ಇರುವ ದೇಶವಾಗಿ ಬೆಳೆದಿದೆ. ಕಟ್ಟಿಗೆ, ನೀರು, ಶೌಚಾಲಯದ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿಜಿ. ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಪಾರ್ಲಿಮೆಂಟ್ ಹೌಸ್ ಒಂದೆಡೆ ಕಟ್ಟಿಸಿದ ಮೋದಿ ಅವರು, ಇನ್ನೊಂದೆಡೆ ಉಜ್ವಲ, ಜನ್‍ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ, ವೇಗವಾಗಿ, ಸಕಾಲದಲ್ಲಿ ಯೋಜನೆಗಳ ಜಾರಿ ಆಗಿದೆ. ಹಿಂದೆ ಗರೀಬಿ ಹಠಾವೋ ಕೇವಲ ಮಾತಿನಲ್ಲಿತ್ತು. ಬಡತನ ದೂರ ಆಗಿರಲಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು. ಬಡತನ ದೂರ ಮಾಡಲು ಬಳಸುವ ಹಣ ಕೆಲವರ ಜೇಬು ಸೇರುತ್ತಿತ್ತು ಎಂದು ಟೀಕಿಸಿದರು.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕು ಆರೋಪ ಕುರಿತು ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ, ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಆದರೆ, ಈ ಬಗ್ಗೆ ಕಾನೂನು ರೀತಿಯ ಕ್ರಮ ಆಗಲಿದೆ. ಕೋರ್ಟ್ ಇದೆ, ಕಾನೂನು ಇದೆ. ಒಬ್ಬ ರಾಜನಿಗೂ ಕೂಡ ಈ ದೇಶದ ಕಾನೂನು ಅನ್ವಯ ಆಗಲಿದೆ. ಕಾನೂನು ಪ್ರಕಾರವೇ ಎಲ್ಲವೂ ನಡೆಯೋದು. ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.