ಬೆಂಗಳೂರು : ಮಡಿಕೇರಿ ಕೋಟೆ ಆವರಣದಲ್ಲಿರುವ ಅರಮನೆ ಹಾಗೂ ಸ್ಮಾರಕಗಳ ದುರಸ್ತಿ ಕಾರ್ಯಕ್ಕೆ ಸೇವಾ ಶುಲ್ಕ ವಿಧಿಸುವ ಅಧಿಕಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(IASD)ಗೆ ಇಲ್ಲವೆಂದು ಆದೇಶಿಸಿರುವ ಹೈಕೋರ್ಟ್, ಸರ್ಕಾರ ಅನುಮೋದಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್) ಅನುಸಾರ ಕಾಮಗಾರಿ ನಡೆಸುವಂತೆ ನಿರ್ದೇಶಿಸಿದೆ.
ದುರಸ್ತಿ ಕಾಮಗಾರಿ ಕಳಪೆಯಾಗಿದೆ ಮತ್ತು ವಿಳಂಬವಾಗುತ್ತಿದೆ ಎಂದು ಆರೋಪಿಸಿ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸೇವಾ ಶುಲ್ಕ ವಿಧಿಸುವ ಅಧಿಕಾರ ಐಎಎಸ್ಡಿಗಿಲ್ಲ ಎಂದು ಆದೇಶಿಸಿದ ಪೀಠ, ಡಿಪಿಆರ್ನಂತೆ ಕಾಮಗಾರಿ ನಡೆಸಲು ನಿರ್ದೇಶಿಸಿತು.
ಹಿಂದಿನ ವಿಚಾರಣೆ ವೇಳೆ, ದುರಸ್ತಿ ಕಾಮಗಾರಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ 10.77 ಕೋಟಿ ರೂ. ಹಣದಲ್ಲಿ ಸೇವಾ ಶುಲ್ಕ ವಿಧಿಸುವ ಕುರಿತು ಅರ್ಜಿದಾರರ ಪರ ವಕೀಲರಾದ ರವೀಂದ್ರನಾಥ್ ಕಾಮತ್ ಪೀಠಕ್ಕೆ ಮಾಹಿತಿ ನೀಡಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಈ ಕುರಿತು ಕಾನೂನಾತ್ಮಕ ಅಂಶಗಳನ್ನು ವಿವರಿಸುವಂತೆ ನಿರ್ದೇಶಿಸಿತ್ತು. ಆದರೆ, ಇಲಾಖೆ ತನ್ನ ಕ್ರಮ ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಇಂದು ನಡೆದ ವಿಚಾರಣೆ ವೇಳೆ ಸೇವಾ ಶುಲ್ಕದ ಕುರಿತು ಆದೇಶ ನೀಡಿದ ಪೀಠ, 1920ರ ಅಧಿಸೂಚನೆಯಂತೆ ಸಂರಕ್ಷಿತ ಸ್ಮಾರಕವಾಗಿರುವ ಅರಮನೆ ಹಾಗೂ ರಾಜನಿಗೆ ಸೇರಿದ ವಸ್ತುಗಳು ಪುರಾತತ್ವ ಇಲಾಖೆಗೆ ಸೇರಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ಯಾವುದೇ ಸೇವಾ ಶುಲ್ಕ ವಿಧಿಸುವಂತಿಲ್ಲ ಅಥವಾ ರಾಜ್ಯ ಸರ್ಕಾರದಿಂದ ವಸೂಲಿ ಮಾಡುವಂತಿಲ್ಲ. ಇದೀಗ ನಡೆಸುತ್ತಿರುವ ಮೊದಲ ಹಂತದ ತುರ್ತು ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ, ಎರಡನೇ ಹಂತದ ದುರಸ್ತಿ ಕಾರ್ಯ ಆರಂಭಿಸಬೇಕು. ಡಿಪಿಆರ್ ಅನುಸಾರ ಕಾಮಗಾರಿ ನಡೆಯುವುದನ್ನು ಮೇಲ್ವಿಚಾರಣೆ ಮಾಡಲು ಉಪ ವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯನ್ನು ಜಿಲ್ಲಾಧಿಕಾರಿ ನೇಮಿಸಬೇಕು. ಈ ಅಧಿಕಾರಿ ಆಗಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಬೇಕು. ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೆರವು ಪಡೆದುಕೊಳ್ಳಬಹುದು ಎಂದು ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.