ಬೆಂಗಳೂರು: ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗಬೇಕಿರುವ ಹಾಗೂ ಹೊರ ರಾಜ್ಯಗಳಿಂದ ರಾಜ್ಯಕ್ಕೆ ವಾಪಸ್ಸು ಬರಲಿರುವ ವಲಸೆ ಕಾರ್ಮಿಕರ ಅಂಕಿಅಂಶ ಮತ್ತು ಅವರ ಪ್ರಯಾಣಕ್ಕೆ ಭರಿಸಲಿರುವ ವೆಚ್ಚದ ಮಾಹಿತಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಲಾಕ್‌ಡೌನ್ ಬಳಿಕ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಾಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರಿ ವಕೀಲರು ಲಿಖಿತ ಮಾಹಿತಿ ಸಲ್ಲಿಸಿ, ರಾಜ್ಯದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಗಳಿಗೆ ಕಳುಹಿಸಿಕೊಡಲು ಹಾಗೂ ಹೊರ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಮರಳಿ ಕರೆತರಲು ಹಲವು ಕ್ರಮಗಳನ್ನು ಕೈಗೊಂಡಿದೆ. ಮೇ 15 ರ ವರೆಗೆ ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಪಂಜಾಬ್‌ನಲ್ಲಿರುವ ರಾಜ್ಯದ ಜನರನ್ನು ಕರೆತರಲು 6 ಶ್ರಮಿಕ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆ ರೈಲುಗಳಲ್ಲಿ ಬಂದವರ ಪ್ರಯಾಣ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಿದೆ ಎಂದರು.
ಅಲ್ಲದೆ, ಮೇ 16 ರ ವರೆಗೆ 76 ಶ್ರಮಿಕ ರೈಲುಗಳ ಮೂಲಕ ಹೊರ ರಾಜ್ಯದ 1,02,616 ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಡಲಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಮತ್ತು ಕೇರಳಕ್ಕೆ ಬಸ್‌ಗಳ ಮೂಲಕ ಕಳುಹಿಸಿಕೊಡಲಾಗಿದೆ. ಇನ್ನು ಸ್ವಂತ ವಾಹನದಲ್ಲಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಗೆ ಗಡಿಯಲ್ಲಿಯೇ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರ ವೈಯಕ್ತಿಕ ವಿವರ ಹಾಗೂ ಯಾವ ಸ್ಥಳಗಳಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಸದ್ಯ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ತೆರಳಬೇಕಿರುವ ಹಾಗೂ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಮರಳಬೇಕಿರುವ ವಲಸೆ ಕಾರ್ಮಿಕರೆಷ್ಟು? ಅವರ ಪ್ರಯಾಣ ವೆಚ್ಚ ಭರಿಸುವವರು ಯಾರು? ಎಂಬ ಬಗ್ಗೆ ಅಂಕಿಅಂಶಗಳ ಸಮೇತ ವಿವರವಾದ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.