ಬೆಂಗಳೂರು:ರಾಜ್ಯದ ಕಾರಾಗೃಹಗಳಲ್ಲಿ ಜನ್ಮತಾಳಿ ಬೆಳೆಯುತ್ತಿರುವ 5 ವರ್ಷದೊಳಗಿನ ಮಕ್ಕಳು ಮತ್ತು ಶಿಕ್ಷೆ ಅನುಭವಿಸುತ್ತಿರುವ ಮಹಿಳಾ ಕೈದಿಗಳಿಗೆ ಕಲ್ಪಿಸಿರುವ ಮೂಲ ಸೌಕರ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಹಾಗೂ ಕೈದಿಗಳ ಆರೋಗ್ಯ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಓದಿ:ಆ್ಯಂಬುಲೆನ್ಸ್ ಟೆಂಡರ್ ರದ್ದು : ಆರೋಗ್ಯ ಸಚಿವರನ್ನು ಪ್ರತಿವಾದಿಯಾಗಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್
ಕೆಲಕಾಲ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್ ವಾದ ಆಲಿಸಿದ ಪೀಠ, ಜೈಲುಗಳಲ್ಲಿನ ಮೂಲ ಸೌಕರ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಲು ಈ ಅರ್ಜಿಯನ್ನು ಸ್ವಯಂ ಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಳ್ಳುವುದಾಗಿ ತಿಳಿಸಿತು.
ಅಲ್ಲದೇ ರಾಜ್ಯದ ಕಾರಾಗೃಹಗಳಲ್ಲಿನ ಮೂಲ ಸೌಕರ್ಯಗಳ ಸುಧಾರಣೆ ವಿಚಾರವಾಗಿ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಅದರಂತೆ ಮೊದಲಿಗೆ ಜೈಲುಗಳಲ್ಲಿ ಸದ್ಯ ಕಲ್ಪಿಸಲಾಗಿರುವ ಕುಡಿಯುವ ನೀರು ಹಾಗೂ ಕೈದಿಗಳಿಗೆ ಶೌಚಾಲಯ ಮತ್ತು ಸ್ನಾನ ಗೃಹಗಳ ಸೌಕರ್ಯಗಳ ಕುರಿತು ಸರ್ಕಾರ ವರದಿ ಸಲ್ಲಿಸಬೇಕು. ಈ ವಿಚಾರವಾಗಿ ಅಮೋಲ್ ಕಾಳೆ ಪರ ವಕೀಲ ಎನ್.ಪಿ.ಅಮೃತೇಶ್ ನ್ಯಾಯಾಲಯಕ್ಕೆ ಅಗತ್ಯ ಸಲಹೆ ನೀಡಬಹುದು. ಅರ್ಜಿದಾರ ಜೈಲಿನಲ್ಲಿ ವೈಯಕ್ತಿಕವಾಗಿ ಯಾವುದೇ ರೀತಿ ಸಮಸ್ಯೆ ಎದುರಿಸುತ್ತಿದ್ದರೆ, ಅದಕ್ಕೆ ಪರಿಹಾರ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿ, ವಿಚಾರಣೆಯನ್ನು ಫೆ. 17ಕ್ಕೆ ಮುಂದೂಡಿತು.