ಬೆಂಗಳೂರು:ಅವಸರವೇ ಅಫಘಾತಕ್ಕೆ ಕಾರಣ ಎಂಬ ವಿಚಾರ ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಜನರ ವೇಗದ ಭರಾಟೆಯಿಂದ ಇತ್ತೀಚೆಗೆ ರಸ್ತೆ ಅಪಘಾತಗಳು ಮಿತಿ ಮೀರಿವೆ. ರಸ್ತೆ ಅಪಘಾತಕ್ಕೆ ಒಳಗಾದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಆಗಬಹುದಾದ ವಿಳಂಬ, ತತ್‍ಕ್ಷಣದಲ್ಲಿ ನೆರವಿಗೆ ಯಾರೂ ಮುಂದೆ ಬಾರದಿರುವುದು, ಚಿಕಿತ್ಸೆಯ ವೆಚ್ಚ ಭರಿಸಲು ಹಣಕಾಸಿನ ಸಮಸ್ಯೆ, ಕಾನೂನಿನ ತೊಡಕುಗಳಿಂದ ಅಪಘಾತದ ನಂತರ ಸರಿಯಾದ ಚಿಕಿತ್ಸೆ ಲಭ್ಯವಾಗದೆ ಗಾಯಾಳುಗಳು ಸಾವನ್ನಪ್ಪುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ರಸ್ತೆ ಅಪಘಾತವು ಚಿಕಿತ್ಸೆಗೊಳಗಾಗುವ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ಅಪಘಾತಗಳು ಸಂಭವಿಸಿದ ಕೂಡಲೇ ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಹೆಚ್ಚಾಗಿ ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾರೆ. ಅಲ್ಲಿ ನೀಡಲಾಗುವ ಚಿಕಿತ್ಸೆ ದುಬಾರಿಯಾಗಿರುವುದರಿಂದ ಗಾಯಗೊಂಡ ವ್ಯಕ್ತಿಯ ಕುಟುಂಬ ಇದರಿಂದ ಹೊಸ ಆರ್ಥಿಕ ಹೊರೆಯನ್ನು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮಂಗಳೂರಿನಲ್ಲಿರುವ ಅತ್ಯಾಧುನಿಕ ಖಾಸಗಿ ಆಸ್ಪತ್ರೆಗಳಿಗೆ ಸುತ್ತಮುತ್ತಲಿನ ಜಿಲ್ಲೆ ಹಾಗೂ ಕೇರಳ ರಾಜ್ಯದಿಂದಲೂ ಜನರು ಬರುತ್ತಾರೆ. ಅಲ್ಲಿ ಸಣ್ಣ ಅಪಘಾತ ಸಂಭವಿಸಿದರೂ ಸಾವಿರಾರು ರೂಪಾಯಿ ಬಿಲ್ ಮಾಡುತ್ತಾರೆ. ಇನ್ನು ಗಂಭೀರ ಗಾಯಗೊಂಡ ಪ್ರಕರಣಗಳು ಇದ್ದರಂತು ಲಕ್ಷಾಂತರ ರೂಪಾಯಿ ಸುರಿಯಲೇಬೇಕಾಗುತ್ತದೆ.