ಬೆಂಗಳೂರು: ಕಾಂಗ್ರೆಸ್ ತನ್ನ ಆಡಳಿತದಲ್ಲಿ ಇಡೀ ಕರ್ನಾಟಕದ ಜನರ ಮಾಹಿತಿಯನ್ನು ಬಳಸಿಕೊಂಡಿತ್ತು. ಆದರೂ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಕಾಂಗ್ರೆಸ್ ಪಕ್ಷದವರು ಹತಾಶೆಗೊಂಡು ಬಿಜೆಪಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಸಾಮಾಜಿಕ ಆರ್ಥಿಕ ಸಮೀಕ್ಷೆ: ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ 130 ಕೋಟಿ ರೂಪಾಯಿ ವೆಚ್ಚ ಮಾಡಿ, ಇಡೀ ಕರ್ನಾಟಕ ಸಾಮಾಜಿಕ ಆರ್ಥಿಕ ಸಮೀಕ್ಷೆ ಎಂಬ ಹೆಸರಿನಲ್ಲಿ ಜಾತಿ, ಉಪಜಾತಿಗಳನ್ನು ಸೃಷ್ಟಿಸಿ, ದಾಖಲಿಸಿದ್ದರು. ಆದರೆ ಆ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸದೇ, ಚುನಾವಣೆ ಉದ್ದೇಶಕ್ಕೆ ಮಾತ್ರ ಕಾಂಗ್ರೆಸ್ ಬಳಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಶಿಕ್ಷೆ ಮೊದಲು ಸಿದ್ದರಾಮಯ್ಯನವರ ಸರ್ಕಾರಕ್ಕೆ ಆಗಬೇಕು. ಈ ವಿಚಾರವಾಗಿ ಸರ್ಕಾರಕ್ಕೆ ಸಂಬಂಧ ಇರುವುದಿಲ್ಲ. ತಳಹಂತದಲ್ಲಿ ಈ ಕೆಲಸವಾಗಿದ್ದರೆ, ಸೂಕ್ತ ವಿಚಾರಣೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ತಜ್ಞರ ಸಮಿತಿ ಪರಿಶೀಲನೆ: ಮೈಸೂರಿನಲ್ಲಿ ತಂಗುದಾಣದ ವಿನ್ಯಾಸದ ಬಗ್ಗೆ ಶಾಸಕ ರಾಮದಾಸ್ ಅವರು ಸ್ಥಳೀಯ ಸಂಸದರ ವಿರುದ್ಧ ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿವಾದದ ಬಗ್ಗೆ ಪರಿಶೀಲಿಸಲು ನಡೆಸಲು ತಜ್ಞರ ಸಮಿತಿ ರಚಿಸಲು ತಿಳಿಸಲಾಗಿದೆ. ಈ ವಿಷಯದಲ್ಲಿ ಸ್ಥಳೀಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಏಕೆ ಬಂದಿದೆ ಎಂದು ತಿಳಿಯುವುದಕ್ಕಿಂತ, ತಜ್ಞರ ಸಮಿತಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ