ಬೆಂಗಳೂರು:ವಿಜಯನಗರದ ವೀರಶೈವ ಶಿಕ್ಷಣ ಸಂಸ್ಥೆಯ ಶ್ರೀಶೈಲ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳಿಗೆ ಒಟ್ಟಿಗೆ ಅನುದಾನ ನೀಡುತ್ತದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಅವ್ರು ಸುಮ್ಮನೆ ರಾಜಕೀಯ ಮಾಡ್ತಿದ್ದಾರೆ. ದೇಶದ 5-6 ರಾಜ್ಯದಲ್ಲಿ ಪ್ರವಾಹ ಬಂದು ಇಂತಹ ಸ್ಥಿತಿ ಇದೆ. ಎಲ್ಲರಿಗೂ ಒಟ್ಟಿಗೆ ಅನುದಾನ ಬಿಡುಗಡೆ ಮಾಡ್ತಾರೆ ಎಂದರು.
ಸಂತ್ರಸ್ತರಿಗೆ ಸುಮಾರು 100 ಮನೆಗಳನ್ನು ಕಟ್ಟಿಸಿ ಕೊಡುತ್ತೇವೆ ಅನುದಾನ ನೀಡುವ ಮುಂಚೆ ಇವರು ಆತುರವಾಗಿ ಪ್ರತಿಭಟನೆ ಮಾಡೋದು ಸರಿಯಲ್ಲ. ಬೇರೆ ಏನು ಕಾರ್ಯಕ್ರಮ ಇಲ್ಲ ಅಂತ ಕಾಂಗ್ರೆಸ್ನವರು ಪ್ರತಿಭಟನೆ ಮಾಡ್ತಿದ್ದಾರೆ. ಕಾಂಗ್ರೆಸ್ ಗೊಂದಲ ಉಂಟು ಮಾಡೋಕೆ ಹೀಗೆ ಮಾಡ್ತಿದೆ. ಈಗಾಗಲೇ ಮನೆ ಕಟ್ಟಲು 1 ಲಕ್ಷ ಬಿಡುಗಡೆ ಮಾಡಿದ್ದೇವೆ. 10 ಸಾವಿರ ರೂ.ಗಳನ್ನು ಸಂತ್ರಸ್ತ ಕುಟುಂಬಗಳಿಗೆ ಕೊಟ್ಟಿದ್ದೇವೆ. ಅಗತ್ಯ ಕ್ರಮ ನಾವು ತಗೊಂಡಿದ್ದೇವೆ. ಆದ್ರು ಅವ್ರಿಗೆ ತೃಪ್ತಿ ಇಲ್ಲ. ಹೀಗಾಗಿ ರಾಜಕೀಯ ಮಾಡ್ತಿದ್ದಾರೆ. ಸಂತೋಷದಿಂದ ಪ್ರತಿಭಟನೆ ಮಾಡಲಿ. ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಆದಷ್ಟು ಬೇಗ ಅನುದಾನವನ್ನು ಮೋದಿ ಬಿಡುಗಡೆ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದೆ ವೇಳೆ ಶ್ರೀಶೈಲ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ನೆರೆ ಹಾವಳಿಯಿಂದ ಬಹಳ ಜನ ಸಂತ್ರಸ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಮಠಗಳು ಸಹಾಯಕ್ಕೆ ಬರಬೇಕು ಎಂದರು. ಅದಕ್ಕೆ ನಾವು ಸುಮಾರು 100 ಮನೆಗಳನ್ನು ಕಟ್ಟಿಸಿ ಕೊಡುವ ಉದ್ದೇಶ ಹೊಂದಿದ್ದೇವೆ. ಜನರು ಕೊಟ್ಟ ಬಂಗಾರವನ್ನು ಮಾರಿ, ಅದರಿಂದ ಬಂದ ಹಣದಿಂದ ಮನೆಗಳನ್ನು ನಿರ್ಮಾಣ ಮಾಡಲಾಗುವುದು.
ಈಗಾಗಲೇ 650 ಗ್ರಾಂ ಬಂಗಾರ ನಮ್ಮಲ್ಲಿ ಇದೆ. ಭಕ್ತರು ಎಷ್ಟು ಸಹಾಯ ಮಾಡುತ್ತಾರೋ ಅದರ ಮೇಲೆ ನಾವು ನಮ್ಮ ಯೋಜನೆ ಅನುಷ್ಠಾನ ತರುತ್ತೇವೆ. ಇತ್ತೀಚೆಗೆ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಆರೋಗ್ಯ ಅರಿವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ವೀರಶೈವ ಸಮುದಾಯದ ಮಹಿಳೆಯರು ನೆರೆ ಪರಿಹಾರಕ್ಕೆ ಚೆಕ್ ಕೊಟ್ಟಿದ್ದಾರೆ ಎಂದು ಹೇಳಿದರು.