ಸಿಎಂ ಕುಮಾರಸ್ವಾಮಿ, ಸಚಿವ ಜಮೀರ್ ಮಧ್ಯೆ ಅಕ್ಕಿ ಜಟಾಪಟಿ! - ಅಕ್ಕಿ
ಮೈತ್ರಿ ಸರ್ಕಾರದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ ಜಟಾಪಟಿ ತಾರಕಕ್ಕೇರಿದ್ದು, ಅಕ್ಕಿ ವಿತರಣೆ ವಿಚಾರ ಸಿಎಂ ಹಾಗೂ ಆಹಾರ ಸಚಿವ ಜಮೀರ್ ಅಹಮದ್ ಖಾನ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆ ಜಟಾಪಟಿ ತಾರಕಕ್ಕೇರಿದ್ದು, ಅಕ್ಕಿ ವಿತರಣೆ ವಿಚಾರ ಸಿಎಂ ಹಾಗೂ ಆಹಾರ ಸಚಿವ ಜಮೀರ್ ಅಹಮದ್ ಖಾನ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಸರ್ಕಾರದ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ. ಫಲಾನುಭವಿಗಳಿಗೆ 7 ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ಮುಕ್ತ ಪರಿಕಲ್ಪನೆಯೊಂದಿಗೆ ಸಿದ್ದರಾಮಯ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಮೈತ್ರಿ ಸರ್ಕಾರ ಬಂದ ಬಳಿಕ ಈ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಸಿಎಂ ಮುಂದಾಗಿದ್ದು, ಮೈತ್ರಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಬಳಿಕ ಮೈತ್ರಿ ಪಕ್ಷದ ಒತ್ತಡಕ್ಕೆ ಮಣಿದು ಸಿಎಂ 7 ಕೆಜಿ ಅಕ್ಕಿ ವಿತರಣೆಯನ್ನು ಮುಂದುವರಿಸಿದ್ದರು. ಇದೀಗ ಮತ್ತೆ ಅನ್ನಭಾಗ್ಯ ಅಕ್ಕಿಗೆ ಕತ್ತರಿ ಹಾಕಲು ಸಿಎಂ ಗಂಭೀರ ಚಿಂತನೆ ನಡೆಸಿರುವುದು ಸಚಿವ ಜಮೀರ್ ಅಹಮದ್ ಖಾನ್ ಕಣ್ಣು ಕೆಂಪಾಗಿಸಿದೆ.
ಸಿಎಂ ಕುಮಾರಸ್ವಾಮಿ ಅನ್ನಭಾಗ್ಯದಡಿ 7 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಸಚಿವ ಜಮೀರ್ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ವಿಧಾನಸೌಧದಲ್ಲಿ ನಡೆದ ಆಹಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹಾಗೂ ಸಚಿವ ಜಮೀರ್ ಮಧ್ಯೆ ತೀವ್ರ ಅಕ್ಕಿ ತಿಕ್ಕಾಟ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಸಚಿವ ಜಮೀರ್ ಖಾನ್ ನಮ್ಮ ಸಿದ್ದರಾಮಯ್ಯ ಸಾಹೇಬರು ನೀಡುತ್ತಿದ್ದ ಏಳು ಕೆಜಿ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಸುಮಾರು ಬಾರಿ ವಾದ ಮಾಡಿದರು. ಇದರಿಂದ ಸಿಎಂ ಇರಿಸು ಮುರಿಸು ಅನುಭವಿಸಿದ್ದರು. ಇದಕ್ಕೆ ಕುಮಾರಸ್ವಾಮಿ 7 ಕೆಜಿ ಅಕ್ಕಿ ವಿತರಣೆಯಿಂದ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಜತೆಗೆ ಅಕ್ಕಿ ಫಲಾನುಭವಿಗಳ ಕೈ ಸೇರದೆ ದುರ್ಬಳಕೆಯಾಗುತ್ತಿದ್ದು, ಅಕ್ಕಿ ಕಡಿತಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಜಮೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಸಿಎಂ ಮತ್ತು ಜಮೀರ್ ಮಧ್ಯೆ ಬಿಸಿ ಬಿಸಿ ಚರ್ಚೆ ನಡೆದಿರುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಾರ್ಷಿಕ ಬಜೆಟ್ 3600 ಕೋಟಿ ರೂಪಾಯಿ. ಅನ್ನಭಾಗ್ಯದಡಿ ಕೇಂದ್ರದ ಪಾಲಿನ 5 ಕೆಜಿ ಬಿಟ್ಟು 2 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಫಲಾನುಭವಿಗಳಿಗೆ ನೀಡುತ್ತಿದೆ. ಈ 2 ಕೆಜಿ ಅಕ್ಕಿ ಖರೀದಿಗಾಗಿ ಸರ್ಕಾರದ ಮೇಲೆ 2400 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ. ಹೀಗಾಗಿ 2 ಕೆಜಿ ಅಕ್ಕಿ ಕಡಿತಗೊಳಿಸಿದರೆ ಈ ಹಣ ಉಳಿತಾಯವಾಗುತ್ತದೆ ಎಂಬುದು ಸಿಎಂ ಲೆಕ್ಕಾಚಾರ ಎನ್ನಲಾಗುತ್ತಿದೆ.