ಬೆಂಗಳೂರು:ಮಂಡ್ಯ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಸಂದರ್ಭ, ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಮಾಧ್ಯಮದವರ ಮೇಲೆ ಹಲ್ಲೆ ಹೇಳಿಕೆ, CM ವಿರುದ್ಧ ಕ್ರಮಕ್ಕೆ ಪತ್ರಕರ್ತರ ಸಂಘ ಆಗ್ರಹ - kannada news
ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂಬ ಉಡಾಫೆ ಮಾತಿಗೆ ಸಂಬಂಧಪಟ್ಟಂತೆ ಸಿಎಂ ಕುಮಾರಸ್ವಾಮಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಕಾರ್ಯನಿರ್ವಾಹಕ ಪತ್ರಕರ್ತರ ಸಂಘ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದೆ.
ವಾರ್ತಾಸೌಧದಲ್ಲಿ ಇಂದು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪದಾಧಿಕಾರಿಗಳ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮಗಳು ಪ್ರಚಾರ ನಡೆಸುತ್ತಿವೆ. ಹೀಗಾಗಿ ಪ್ರಚಾರ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂದು ಉಡಾಫೆಯಾಗಿ ಹೇಳುವುದರ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿವಾದ ಸೃಷ್ಟಿಸಿದ್ದರು. ಸಾಂವಿಧಾನಿಕ ಜವಾಬ್ದಾರಿ ಸ್ಥಾನದಲ್ಲಿದ್ದು, ಪತ್ರಕರ್ತರು ನಿರ್ಭಯವಾಗಿ ಕೆಲಸ ಮಾಡಲು ಅಗತ್ಯ ಕ್ರಮಕೈಗೊಳ್ಳುವ ಹೊಣೆಗಾರಿಕೆ ತೋರದೆ ಸ್ವತಃ ಮುಖ್ಯಮಂತ್ರಿಯೇ ಈ ರೀತಿ ಹೇಳಿಕೆ ನೀಡಿರುವುದು ನೋವಿನ ಮತ್ತು ವಿಷಾದದ ಸಂಗತಿ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದವರು ಮುಕ್ತವಾಗಿ ಕಾರ್ಯನಿರ್ವಹಣೆ ಮಾಡಲು ರಕ್ಷಣೆ ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಆಯೋಗವನ್ನು ವಿನಂತಿಸಿದ್ದಾರೆ.