ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನಿಗೆ ಕಲ್ಲಿನಲ್ಲಿ ಹೊಡೆದು ಹತ್ಯೆಗೈದಿದ್ದ ಆರೋಪಿಯನ್ನ ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ನರೇಶ್ ಎಂಬಾತನ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದ ಮಾರಿಮುತ್ತು ಎಂಬಾತನನ್ನು ಬಂಧಿಸಲಾಗಿದೆ. ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್ನಲ್ಲಿ ಕುಡಿಯಲು ಬಂದಿದ್ದ ನರೇಶ್ ಹಾಗೂ ಮಾರಿಮುತ್ತು ನಡುವೆ ಗಲಾಟೆಯಾಗಿತ್ತು. ನೋಡ-ನೋಡುತ್ತಿದ್ದಂತೆ ಗಲಾಟೆ ಹೆಚ್ಚಾಗಿ ಫುಟ್ ಪಾತ್ ಮೇಲಿದ್ದ ಕಲ್ಲನ್ನು ನರೇಶ್ ತಲೆಗೆ ಹೊಡೆದು ಮಾರಿಮುತ್ತು ಎಸ್ಕೇಪ್ ಆಗಿದ್ದರು. ಪೆಟ್ಟು ಹೆಚ್ಚಾಗಿದ್ದರಿಂದ ರಕ್ತಸ್ರಾವ ಉಂಟಾಗಿ ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕುಡಿದ ನಶೆಯಲ್ಲಿ ಗಲಾಟೆ: ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ
ಕೃತ್ಯಕ್ಕೆ ಕಾರಣವೇನು:ಆರೋಪಿ ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದ ವಿಚಿತ್ರ ಮನಸ್ಥಿತಿಯವನಾಗಿದ್ದ. ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಒಂದು ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ. ನಿನ್ನೆ ಮಧ್ಯಾಹ್ನ ಮಾರಿಮುತ್ತು ಜೊತೆ ಬಾರಿಗೆ ಹೋಗಿದ್ದ ನರೇಶ್, ನಿನ್ನ ಭವಿಷ್ಯ ಹೇಳ್ತೀನಿ ಎಂದು ಆತನ ಬಳಿ 'ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ' ಎಂದು ಆತನನ್ನ ರೇಗಿಸಲಾರಂಭಿಸಿದ್ದ. ಸಿಟ್ಟಿಗೆದ್ದ ಮಾರಿಮುತ್ತು ಬಾರ್ ಒಳಗಡೆಯಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಇಬ್ಬರೂ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದಿದ್ದ ಮಾರಿಮುತ್ತು ಪರಾರಿಯಾಗಿದ್ದ. ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದ. ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.