ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರೀ ವಸೂಲಿ ವಸೂಲಿ ವಸೂಲಿ ಬಾಜಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸದಾಶಿವ ನಗರದ ತಮ್ಮ ನಿವಾಸದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ಮಂತ್ರಿ ಮಾಡದೇ ಇರುವವರಿಗೆ 2-3 ಸಾವಿರ ಕೋಟಿ ಕೆಲಸ ಅಂತಾ ಹಂಚಿಕೆ ಮಾಡುತ್ತಿದ್ದಾರೆ. ನಮಗೆ ಅದೇ ಶಾಸಕರು ಮಾಹಿತಿ ನೀಡುತ್ತಿದ್ದಾರೆ. ಸಾವಿರಾರು ಕೋಟಿ ಹಳೆ ಕೆಲಸದ ಬಿಲ್ ಉಳಿದುಕೊಂಡಿದೆ. ಮುಂಚಿತವಾಗಿ ಹಣ ತಲುಪಿಸುತ್ತಾರೆ. ಅವರಿಗೆ ಕೆಲಸ ಹಂಚಿಕೆಯಾಗುತ್ತಿದೆ. ಯಾವುದೂ ಪಾರದರ್ಶಕವಾಗಿ ಟೆಂಡರ್ ಆಗ್ತಾ ಇಲ್ಲ. ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆ ಆಗಿಲ್ಲ. ಅಲ್ಲಿ 3 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ ಎಂದು ದೂರಿದರು.
ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಅಧಿವೇಶನ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ಇಲಾಖೆಗಳಲ್ಲಿ ತರಾತುರಿಯಲ್ಲಿವೆ. ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲ ಇಲಾಖೆಗಳಲ್ಲಿ ಟೆಂಡರ್ ರೆಡಿ ಮಾಡ್ತಾ ಇದ್ದಾರೆ. 500 ಕೋಟಿ ಟೆಂಡರ್ ಇದ್ರೆ ಅದನ್ನು 1000 ಕೋಟಿ ರೂ. ಎಸ್ಟಿಮೇಟ್ ಮಾಡ್ತಾ ಇದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲೂ ಕೂಡ ಎಸ್ಡಿಮೇಟ್ ಅನ್ನು 100% ಗಿಂತ ಜಾಸ್ತಿ ಮಾಡ್ತಾ ಇದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು ಶಾಸಕರಿಗೆ ಹಂಚಿ ಬಿಟ್ಟಿದ್ದಾರೆ. ಗುತ್ತಿಗೆದಾರರನ್ನು ಸೆಟ್ ಮಾಡಬೇಕು ಅಂತ ಶಾಸಕರಿಗೆ ಹಂಚಿಬಿಟ್ಟಿದ್ದಾರೆ. ಬೀದಿಯಲ್ಲಿ ನಿಂತು ಅವರು ಕರೆತಿದ್ದಾರೆ ಬನ್ನಿ ಬನ್ನಿ ಅಂತ ಎಂದು ಹೇಳಿದರು.
ಭ್ರಷ್ಟಾಚಾರದ ಕೂಪ: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪ ಆಗಿದೆ. ಎಲ್ಲ ಇಲಾಖೆಗಳಲ್ಲೂ ದುಡ್ಡು ಲೂಟಿ ಹೊಡೆಯೋದಕ್ಕೆ ಮುಂದಾಗಿದ್ದಾರೆ. ಆಡಳಿತದಲ್ಲಿ ಎಲ್ಲ ನಾಯಕರನ್ನೂ ಸುಮ್ಮನೆ ಬಿಡೋದಿಲ್ಲ. ಕರ್ನಾಟಕಕ್ಕೆ ಭ್ರಷ್ಟಾಚಾರದ ರಾಜಧಾನಿ ಎಂಬ ಹೆಸರು ಬಂದಿದೆ. ನಾವು ಇದನ್ನು ಸುಮ್ನೆ ಬಿಡುವುದಿಲ್ಲ. ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಗುತ್ತಿಗೆದಾರರ ಅಧಿಕಾರಿಗಳಿಗೆ ವಾರ್ನ್ ಮಾಡ್ತಾ ಇದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮವಾಗಿ ನೀಡಿರುವ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಹಾಗೂ ರಾಜಕಾರಣಿಗಳನ್ನೂ ಕೂಡ ಬಿಡಲ್ಲ ಎಂದು ಕಿಡಿ ಕಾರಿದರು.