ಬೆಂಗಳೂರು :ಆರ್ಥಿಕತೆಯ ಪ್ರಮುಖ ಆಧಾರಗಳಲ್ಲಿ ಒಂದಾಗಿರುವ ಟ್ಯಾಕ್ಸಿ ಆಪರೇಟರ್ಸ್, ಎಂಪ್ಲಾಯಿ ಟ್ರಾನ್ಸ್‌ಪೋರ್ಟ್ ಮತ್ತು ಟೂರಿಸ್ಟ್ ಆಪರೇಟರ್ ಉದ್ಯಮ ಕ್ಷೇತ್ರಕ್ಕೆ ಈಗ ತೊಂದರೆಗೆ ಸಿಲುಕಿದೆ, ಹೀಗಾಗಿ ಸರ್ಕಾರದಿಂದ ಕೆಲ ಸಹಕಾರಗಳು ಅಗತ್ಯವಿದೆ ಎಂದು ಮನವಿ ಮಾಡಿವೆ.
ಕರ್ನಾಟಕ ಸ್ಟೇಟ್ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್, ಈ ಸಂಬಂಧ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದು ಅದರಲ್ಲಿ ಒಟ್ಟು ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ.
ಅತ್ಯಂತ ಪ್ರಮುಖವಾದ ಬೇಡಿಕೆ, ಅಸಂಘಟಿತ ಉದ್ಯೋಗಿಗಳ ಶೇ.50 ರಷ್ಟು ವೇತನವನ್ನು ಸರ್ಕಾರ ಭರಿಸಬೇಕು. ಉಳಿದಂತೆ, ಔದ್ಯಮಿಕ ಬಂಡವಾಳದ ಕೊರತೆಯನ್ನು ಮೀರಿ ನಿಲ್ಲುವ ಸಲುವಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸಾರಿಗೆ ಉದ್ಯಮಕ್ಕೆ ಸರ್ಕಾರ ಬಡ್ಡಿರಹಿತ ಸಾಲ ಒದಗಿಸಬೇಕು. ಮುಂದಿನ ಆರು ತಿಂಗಳ ಅವಧಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ಮುಂದಿನ ಎರಡು ವರ್ಷಗಳ ಕಾಲ ಇಂಡೈರೆಕ್ಟ್ ಟ್ಯಾಕ್ಸ್ ಸಂಗ್ರಹಿಸಬಾರದು. ಹಲವು ಆಪರೇಟರ್‌ಗಳಿಗೆ ಒಂದು ತಿಂಗಳ ಲಾಕ್‌ಡೌನ್ ಅವಧಿಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇಲ್ಲ. ಕಾರ್ಮಿಕರ ಸಂಬಳ, ಕನಿಷ್ಠ ಅಗತ್ಯದ ಆಹಾರ ಧಾನ್ಯ ಒಳಗೊಂಡ ಯೋಜನೆಯನ್ನು ಸರ್ಕಾರ ಆರಂಭಿಸಬೇಕು. ಇಡೀ ಹೊರೆಯನ್ನು ಟೂರಿಸ್ಟ್ ಆಪರೇಟರ್‌ಗಳು ನಿಭಾಯಿಸುವುದು ಅತಿ ಕಷ್ಟ ಎಂಬುದು ಇತರ ಬೇಡಿಕೆಗಳು ಆಗಿವೆ.
ನಮ್ಮ ಬೇಡಿಕೆಗಳು ಅಷ್ಟೇನೂ ಸರ್ಕಾರಕ್ಕೆ ಹೊರೆಯಾಗುವಂತದ್ದಲ್ಲ. ಆದ್ದರಿಂದ ಆದಷ್ಟು ಬೇಗ ಸರ್ಕಾರದಿಂದ ಉತ್ತಮ ಸುದ್ದಿ ಸಿಗಲಿದೆ ಎಂಬ ವಿಶ್ವಾಸವನ್ನು ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ವ್ಯಕ್ತಪಡಿಸಿದ್ದಾರೆ.