ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕಿತರ ಸಂಪರ್ಕಿತರಿಗೆ ಆಯುರ್ವೇದ ಔಷಧ ನೀಡುವ ಪ್ರಯೋಗ ಮುಂದುವರೆಸುವ ಕುರಿತು ಕೋವಿಡ್-19 ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದು, ಸಭೆಗೆ ಆಯುರ್ವೇದ ವೈದ್ಯ ಡಾ. ಗಿರಿಧರ್ ಕಜೆ ಅವರಿಗೂ ಆಹ್ವಾನ ನೀಡಲಾಗಿದೆ.
ಈಗಾಗಲೇ ಡಾ. ಗಿರಿಧರ್ ಅವರ ಆಯುರ್ವೇದ ಮಾತ್ರೆಗಳನ್ನು 10 ಕೊರೊನಾ ಸೋಂಕಿತರಿಗೆ ನೀಡಲಾಗಿದ್ದು, ಎಲ್ಲಾ 10 ಮಂದಿಯೂ ಗುಣಮುಖರಾಗಿದ್ದಾರೆ. ಎಲ್ಲಾ ಹಂತದ ಸೋಂಕಿತರಿಗೂ ಮಾತ್ರೆಗಳನ್ನು ನೀಡಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಪ್ರಯೋಗದ ಬಗ್ಗೆ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ವಿಧಾನಸೌಧದಲ್ಲಿ ಸಂಜೆ ನಡೆಯಲಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಗೆ ಡಾ. ಗಿರಿಧರ್ ಕಜೆ ಅವರಿಗೂ ಆಹ್ವಾನ ನೀಡಿದ್ದು, ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಾಗುತ್ತದೆ. ಎಷ್ಟು ಜನರಿಗೆ ಆಯುರ್ವೇದ ಮಾತ್ರೆ ಕೊಡಬೇಕು, ಸೋಂಕಿತರಿಗೆ ಕೊಡಬೇಕೋ, ಸಂಪರ್ಕಿತರಿಗೆ ಕೊಡಬೇಕೋ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಈಗಾಗಲೇ 10 ಜನರಿಗೆ ಔಷಧಿ ನೀಡಲಾಗಿದ್ದು, ಕ್ಲಿನಿಕಲ್ ಟ್ರಯಲ್ ಸಫಲವಾಗಿದೆ ಎಂದು ಸರ್ಕಾರವೇ ಅಧಿಕೃತ ಘೋಷಣೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ 100-200 ಜನ ಕೊರೊನಾ ಸೋಂಕಿತರಿಗೆ ಆಯುರ್ವೇದ ಮಾತ್ರೆಗಳನ್ನು ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಇದನ್ನು ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಈ ಪ್ರಯೋಗ ಜಾರಿಗೆ ಬಾರದೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಮೆಡಿಸಿನ್ ಮಾಫಿಯಾದಂತಹ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆ ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಆಯುರ್ವೇದ ಔಷಧಿ ಪ್ರಯೋಗದ ಕುರಿತು ಮಹತ್ವದ ಚರ್ಚೆ ನಡೆಯಿತ್ತಿರುವುದು ಕೊರೊನಾ ಸೋಂಕಿತರಿಗೆ ಆಯುರ್ವೇದ ಸಂಜೀವಿನಿ ಸಿಗುವ ಕನಸು ಚಿಗುರುವಂತೆ ಮಾಡಿದೆ.
ಡಾ. ಗಿರಿಧರ್ ಕಜೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಸೋಂಕಿತರ ಸಂಪರ್ಕಿತರು ಎಷ್ಟು ಜನ ಇದ್ದಾರೋ ಅವರೆಲ್ಲರಿಗೂ ಸರ್ಕಾರದ ಮೂಲಕ ಒಮ್ಮಲೇ ಆಯುರ್ವೇದ ಮಾತ್ರೆ ನೀಡಿದರೆ ಅವರು ಸೋಂಕಿತರಾಗುವುದು ತಪ್ಪಲಿದೆ. ಈ ಪ್ರಯೋಗ ಮಾಡಿ ಇದಕ್ಕೆ ಅಗತ್ಯ ಔಷಧಿಯನ್ನು ಉಚಿತವಾಗಿ ಸರ್ಕಾರಕ್ಕೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ. ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವಾಗಿ ಸಾಕಷ್ಟು ಎಚ್ಚರಿಕೆ, ಐಸಿಎಂಆರ್ ಅನುಮತಿ ಅಗತ್ಯ. ಆದರೆ ಶಂಕಿತರಿಗೆ ಕೊಡಲು ಯಾವುದೇ ಸಮಸ್ಯೆ ಇಲ್ಲ. ಈ ವಿಚಾರವಾಗಿ ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.