ಬೆಂಗಳೂರು:2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಸಮುದಾಯಗಳ ಮತಗಳನ್ನು ಸೆಳೆಯಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಆರಂಭಿಕ ಹಂತವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ನಾಲ್ಕು ಸಮುದಾಯಗಳ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ನ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ನಾಲ್ಕು ಸಮುದಾಯಗಳ ಮತಬುಟ್ಟಿಗೆ ಕೈ ಹಾಕಿದ ಮೋದಿ:ರಾಜ್ಯ ವಿಧಾನಸಭೆ ಚುನಾವಣೆಗೆ ಆರೇಳು ತಿಂಗಳು ಬಾಕಿ ಉಳಿದಿದ್ದು, ರಾಜ್ಯಕ್ಕೆ ಬಿಜೆಪಿ ವರಿಷ್ಠರು ಹೆಚ್ಚಿನ ಗಮನ ನೀಡಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಐದು ತಿಂಗಳಿನಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಭೇಟಿ ನೀಡಿದರು. ಈವರೆಗಿನ ಪ್ರವಾಸದ ವೇಳೆ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಮತದಾರರ ಸೆಳೆಯುತ್ತಿದ್ದ ಪ್ರಧಾನಿ ಮೋದಿ ಈ ಬಾರಿ ಪ್ರಮುಖ ನಾಲ್ಕು ಸಮುದಾಯಗಳ ಮತ ಬುಟ್ಟಿಗೆ ಕೈ ಹಾಕಿದ್ದಾರೆ.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮೋದಿ ಮಾಡಿದ ಮೊದಲ ಕೆಲಸ ಎಂದರೆ ದಾಸ ಶ್ರೇಷ್ಟ ಕನಕದಾಸರ ಜಯಂತಿ ನಿಮಿತ್ತ ಕನಕರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಮಹರ್ಷಿ ವಾಲ್ಮೀಕಿ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ಇದರ ಜೊತೆಗೆ ವೀರ ವನಿತೆ ಒನಕೆ ಓಬವ್ವ ಸ್ವರಣೆಯನ್ನೂ ಮಾಡಿದರು.
ಕುರುಬ ಸಮುದಾಯ ಟಾರ್ಗೆಟ್ ಮಾಡಿದ ಮೋದಿ: ಈ ಮೂಲಕ ಸಿದ್ದರಾಮಯ್ಯ ಬೆನ್ನಿಗಿರುವ ಕುರುಬ ಸಮುದಾಯವನ್ನು ಮೋದಿ ಟಾರ್ಗೆಟ್ ಮಾಡಿದ್ದಾರೆ. ಮೀಸಲಾತಿ ಹೆಚ್ಚಳದ ಜೊತೆಗೆ ಮಹರ್ಷಿ ಸ್ಮರಿಸುವ ಮೂಲಕ ಎಸ್ಟಿ ಸಮುದಾಯವನ್ನೂ ಭದ್ರಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಇದು ಮುಂಬರಲಿರುವ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?
ನಂತರ ವಂದೇ ಭಾರತ್ ಮತ್ತು ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿ ಕಾಶಿ ಯಾತ್ರಾತ್ರಿಗಳಿಗೆ ಸಂತಸದ ಸುದ್ದಿ ನೀಡಿದ ನರೇಂದ್ರ ಮೋದಿ ನಂತರ ಒಕ್ಕಲಿಗ ಮತಗಳ ಟಾರ್ಗೆಟ್ ಎನ್ನುವಂತೆ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದರು. ಆ ಮೂಲಕ ಒಕ್ಕಲಿಗ ಮತಕ್ಕಾಗಿ ಪೈಪೋಟಿ ನಡೆಸುತ್ತಿರುವ ಜೆಡಿಎಸ್ ನ ದಳಪತಿಗಳು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮೋದಿ ಮಾಸ್ಟರ್ ಸ್ಟ್ರೋಕ್ ನೀಡುವ ರೀತಿ ಕೆಂಪೇಗೌಡ ಪ್ರತಿಮೆ ಉದ್ಘಾಟಿಸಿದರು.
ಬಿಎಸ್ವೈ, ಬೊಮ್ಮಾಯಿ ಕೊಡುಗೆಗಳ ಪ್ರಸ್ತಾಪ: ಒಕ್ಕಲಿಗ ಸಮುದಾಯದ ಪರಮೋಚ್ಚ ಸ್ವಾಮೀಜಿಯಾಗಿರುವ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಿ ಕೆಂಪೇಗೌಡರ ಕನಸಿನ ಬೆಂಗಳೂರು ಕಟ್ಟುವ ಘೋಷಣೆ ಮಾಡಿ ಒಕ್ಕಲಿಗ ಸಮುದಾಯವನ್ನು ಆಕರ್ಷಿಸುವ ತಂತ್ರ ಅನುಸರಿಸಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಕೊಡುಗೆಯನ್ನು ಪ್ರಸ್ತಾಪಿಸುತ್ತಲೇ ಬಿಜೆಪಿ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯವನ್ನೂ ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನಿಸಿದರು.