ಬೆಂಗಳೂರು: ಜಮೀನು ಖಾತೆ ಬದಲಾವಣೆ ಮಾಡಿಕೊಡುವುದಕ್ಕಾಗಿ ಸಾವಿರ ರೂಪಾಯಿ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿ ವಿಧಿಸಿದ್ದ ಮೂರು ವರ್ಷ ಶಿಕ್ಷೆಯ ಪ್ರಮಾಣವನ್ನು ಹೈಕೋರ್ಟ್ ಒಂದು ವರ್ಷಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆಯ ವರುಣಾ ಹೋಬಳಿ ಮೊಸನಬಾಯನಹಳ್ಳಿಯ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಎನ್. ಪಿ. ನಾಗೇಶ (73) ಎಂಬುವರು ತಮಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷದ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಾರೆ. ಈ ಸಂಬಂಧ ತನಿಖಾಧಿಕಾರಿಗಳು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. ಹೀಗಾಗಿ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ಸಮಂಜಸವಾಗಿದೆ. ಆದರೆ, ಸಾವಿರ ರೂ. ಲಂಚಕ್ಕೆ ಮೂರು ವರ್ಷ ಶಿಕ್ಷೆ ವಿಧಿಸಿರುವುದು ದೊಡ್ಡ ಪ್ರಮಾಣದ್ದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದಾಗ್ಯೂ ಅರ್ಜಿದಾರರು 2007ರಲ್ಲಿ ನಿವೃತ್ತರಾಗಿದ್ದಾರೆ. ವಿಚಾರಣಾ ನ್ಯಾಯಾಲಯ 2011ರಲ್ಲಿ ಶಿಕ್ಷೆ ಪ್ರಕಟಿಸಿದೆ. ಇದೀಗ ಅವರಿಗೆ 73 ವರ್ಷ ವಯಸ್ಸಾಗಿದ್ದು, ಶಿಕ್ಷೆ ಪ್ರಮಾಣ ಕಡಿಮೆ ಮಾಡುತ್ತಿರುವುದಾಗಿ ಪೀಠ ಹೇಳಿದೆ. ಜತೆಗೆ, ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆ ಸೆಕ್ಷನ್ 7 (ಲಂಚ ಸ್ವೀಕಾರ) ರ ಅಡಿ 6 ತಿಂಗಳು ಮತ್ತು ಸೆಕ್ಷನ್ 13(2)(ಸರ್ಕಾರಿ ನೌಕರನ ಅಪರಾಧಿಕ ದುರ್ನಡತೆ)ರ ಅಡಿಯಲ್ಲಿ ಒಂದು ವರ್ಷಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿ ಆದೇಶಿಸಿದೆ.