ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ವಿಚಾರಣೆಗೆ ಒಳಗಾಗಿದ್ದ ಶಂಕಿತ ಆರೋಪಿಯೊಬ್ಬರು ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲವೆಂದು ವಿಡಿಯೋ ಮೂಲಕ ಹೇಳಿದ್ದಾರೆ.
ನಿರಂತರ ವಿಚಾರಣೆ ಬಳಿಕ ಖಾಸಗಿ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಆಲ್ದೂರಿನ ಭವಿತ್ ಎಂಬಾತ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾನೆ. "ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗಿದೆ. ಮಾಧ್ಯಮಗಳಲ್ಲಿ ಸಿಡಿ ಸೂತ್ರಧಾರ ಎಂದು ಬಿಂಬಿಸಲಾಗುತ್ತಿದೆ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
"ನನಗೂ ಕುಟುಂಬವಿದೆ. ನನ್ನ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೇಕಾದರೆ ನೀವೇ ನಮ್ಮ ಮನೆಗೆ ಹೋಗಿ ಬನ್ನಿ. ಒಂದು ವೇಳೆ ನಾನೇನಾದರೂ ತಪ್ಪು ಮಾಡಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಳ್ಳುತ್ತಿದೆ. ನಾನು ತಪ್ಪು ಎಸಗಿಲ್ಲ. ಎಸ್ಐಟಿ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ತಪ್ಪಿತಸ್ಥನಂತೆ ಮಾಧ್ಯಮದಲ್ಲಿ ಬಿಂಬಿಸಬೇಡಿ." ಎಂದು ವಿಡಿಯೋದಲ್ಲಿ ಭವಿತ್ ಮನವಿ ಮಾಡಿದ್ದಾರೆ.
ಭವಿತ್ ಸಿಡಿಯಲ್ಲಿನ ವಿಡಿಯೋಗೆ ವಾಯ್ಸ್ ಓವರ್ ಕೊಟ್ಟ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಈಗಾಗಲೇ ಎಸ್ಐಟಿ ಈತನ ಸ್ಯಾಂಪಲ್ ವಾಯ್ಸ್ ಪಡೆದು ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಿದೆ. ವರದಿ ಬಂದ ಬಳಿಕವಷ್ಟೇ ಅಧಿಕೃತವಾಗಿ ತಿಳಿಯಲಿದೆ.