ಸುರ್ಜೇವಾಲ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಬೆಂಗಳೂರು : "ಕರ್ನಾಟಕ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಪಾಲಿನ ಎಟಿಎಂ ಆಗಿದೆ. ಈ ಎಟಿಎಂನಿಂದ ರಾಜ್ಯ ಕಾಂಗ್ರೆಸ್ ನಾಯಕರು ಕದಿಯಬಹುದು ಎನ್ನುವ ಆತಂಕದಿಂದಲೇ ಎಟಿಎಂ ಮೇಲೆ ನಿಗಾ ಇರಿಸಲು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅಧಿಕಾರಿಗಳ ಬಿಬಿಎಂಪಿ ಸಭೆಯಲ್ಲಿ ಕುಳಿತಿದ್ದರು. ಆರಂಭದಿಂದಲೇ ಸರ್ಕಾರದ ಮೇಲೆ ಹಿಡಿತ ಸಾಧಿಸಬೇಕು ಎಂದೇ ಸುರ್ಜೇವಾಲ ಸಭೆಯಲ್ಲಿ ಇದ್ದರು" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ಪಕ್ಷದ ನಾಯಕರು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇದೆ. ಈ ಹಿಂದೆಯೂ ಕಾಂಗ್ರೆಸ್‌ನಲ್ಲಿ ಉಸ್ತುವಾರಿಯಾಗಿದ್ದವರು ಮಂತ್ರಿಗಳು ಮತ್ತು ಅಧಿಕಾರಿಗಳ ಸಭೆ ಮಾಡಿದ್ದರು. ಆಗ ಕೂಡ ಇಂತಹದ್ದೇ ಸನ್ನಿವೇಶ ಎದುರಾಗಿತ್ತು. ಸರ್ಕಾರಿ ಸಭೆಗಳಲ್ಲಿ ಸಂಬಂಧಪಡದೇ ಇರುವವರು ಭಾಗಿಯಾಗಬಾರದು. ಅಧಿಕೃತವಾಗಿ ಆಗಲಿ ಅನಧಿಕೃತವಾಗಿ ಆಗಲಿ ಆಹ್ವಾನ ಇಲ್ಲದವರು ಭಾಗಿಯಾಗಬಾರದು" ಎಂದರು.
"ಆದರೂ ಸುರ್ಜೇವಾಲ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಕಾಂಗ್ರೆನ್ನವರು ಏನೇ ಹೇಳಬಹುದು. ಆದರೆ ಮಾಧ್ಯಮಗಳಲ್ಲಿ ಇದೆಲ್ಲವೂ ಬಂದಿದೆ. ಅಧಿಕಾರಿಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕರೆಯಲು ಬಂದಿದ್ದರೆ, ಹೊರಗಡೆ ಕಾಯುತ್ತಿದ್ದರು. ಒಳಗಡೆ ಬಂದು ಕೂತು ಮಾತುಕತೆ ಚರ್ಚೆ ನಡೆಸುತ್ತಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಾರಂಭದಿಂದಲೇ ಹಿಡಿತ ಸಾಧಿಸಬೇಕು. ಇಲ್ಲದಿದ್ದರೆ ಎಟಿಎಂ ಅನ್ನೇ ಕದ್ದು ಬಿಟ್ಟಾರೋ ಎಂದು ಆರಂಭದಲ್ಲಿಯೇ ಹಿಡಿತ ಇರಲಿ ಎಂದು ಸಭೆ ನಡೆಯುವಾಗಲೇ ಸರ್ಜೇವಾಲ ಕುಳಿತು ಎಲ್ಲವನ್ನೂ ನಿಗಾ ವಹಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಈಗ ಎಟಿಎಂ ಎಂದು ಸ್ಪಷ್ಟವಾಗಿ ಗೊತ್ತಾಗಿದೆ. ಆ ಎಟಿಎಂ ವ್ಯವಸ್ಥೆಯನ್ನು ಸದೃಢಗೊಳಿಸಲು ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಕುಳಿತಿದ್ದರು" ಎಂದು ಟೀಕಿಸಿದರು.
"ಈ ಹಿಂದೆಯೂ ಸಚಿವ ಸಂಪುಟಕ್ಕೆ ಯಾರು ಸೇರುತ್ತಾರೆ ಎಂದು ರಾಜ್ಯಪಾಲರಿಗೆ ಪತ್ರ ಕಳಿಸುವ ವೇಳೆಯೂ ಇಂತವರನ್ನೇ ನೇಮಕ ಮಾಡಬೇಕು ಎಂದು ಕೆ.ಸಿ.ವೇಣುಗೋಪಾಲ್ ಆದೇಶ ಮಾಡಿ ರಾಜ್ಯಪಾಲರಿಗೆ ಪತ್ರ ಕಳಿಸಿಕೊಟ್ಟಿದ್ದರು. ಇದನ್ನು ಕೂಡ ನಾವು ಗಮನಿಸಿದ್ದೇವೆ. ಪ್ರಜಾಪ್ರಭುತ್ವದ ಬಗ್ಗೆ ಸಂವಿಧಾನದ ಬಗ್ಗೆ ಕಾಂಗ್ರೆಸ್ ನಾಯಕರು ಬಹಳ ಮಾತನಾಡುತ್ತಾರೆ. ಆದರೆ ಸಂವಿಧಾನವನ್ನು ಅತಿ ಹೆಚ್ಚು ಉಲ್ಲಂಘನೆ ಮಾಡಿದ್ದು ಕಾಂಗ್ರೆಸ್. ಇದು ಸಚಿವ ಹೆಚ್.ಸಿ. ಮಹದೇವಪ್ಪನವರಿಗೆ ಗೊತ್ತಾಗಬೇಕು" ಎಂದು ಬಿಜೆಪಿ ಸಂವಿಧಾನ, ಪ್ರಜಾಪ್ರಭುತ್ವ ಉಲ್ಲಂಘನೆ ಮಾಡುತ್ತಿದೆ ಎನ್ನುವ ಆರೋಪ ಮಾಡಿದ್ದ ಮಹಾದೇವಪ್ಪಗೆ ಬೊಮ್ಮಾಯಿ ಟಾಂಗ್ ಕೊಟ್ಟರು.
ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ: "ನನ್ನ ಜೀವನದಲ್ಲಿ ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡುವುದು ಇಲ್ಲ. ಇದರ ಅವಶ್ಯಕತೆಯೂ ನನಗೆ ಇಲ್ಲ. ಶಾವನೂರು ಶಿವಶಂಕರಪ್ಪನವರು ನಮ್ಮ ಸಂಬಂಧಿ ಅವರ ಮನೆಯ ಹೊಸ ಸಂಬಂಧ ಮಾತುಕತೆ ನಡೆಸಲು ಸೇರಿದ್ದರು. ಆಕಸ್ಮಿಕವಾಗಿ ನಾನು ಅಲ್ಲಿಗೆ ಹೋದಾಗ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದೆ ಅಷ್ಟೇ. ಬೇರೆ ಪಕ್ಷದ ಶಾಸಕರು ಸಂಸದರು ಸೇರಿ ಬಹಳಷ್ಟು ನಾಯಕರನ್ನು ನಾನು ಭೇಟಿ ಮಾಡಿದ್ದೇನೆ. ಕರ್ನಾಟಕದ ರಾಜಕಾರಣದಲ್ಲಿ ಇದು ಸರ್ವೇಸಾಮಾನ್ಯ. ಈಗಾಗಲೇ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದವರಿಗೂ ಕೂಡ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಹಾಗಾಗಿ ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ" ಎಂದು ಹೇಳಿದರು.
"ನಾವು ಈಗಾಗಲೇ ದಾಖಲೆ ಬೇಕಾದರೆ ಕೊಡಲು ಸಿದ್ದ. ಸಿಎಂ ಸಿದ್ದರಾಮಯ್ಯ ವಿರುದ್ಧ 5 ಪ್ರಮುಖ ಕೇಸುಗಳನ್ನು ಲೋಕಾಯುಕ್ತದಲ್ಲಿ ದಾಖಲು ಮಾಡಿದ್ದೇವೆ. ನಾವು ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲ. ಸಿದ್ದರಾಮಯ್ಯ ಅವರನ್ನೇ ಆರೋಪಿಯನ್ನಾಗಿ ಮಾಡಿ ಕೇಸುಗಳನ್ನು ದಾಖಲು ಮಾಡಿದ್ದೇವೆ. ಎಸಿಬಿಯಲ್ಲಿದ್ದ 60 ಕೇಸುಗಳನ್ನು ಲೋಕಾಯುಕ್ತಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಆರೋಪವನ್ನು ಸ್ಪಷ್ಟವಾಗಿ ಬೊಮ್ಮಾಯಿ ತಳ್ಳಿಹಾಕಿದರು.
ಕೆಂಪಣ್ಣ ವರದಿ ಮಂಡನೆ ಅಗತ್ಯ ಇರಲಿಲ್ಲ: "ಕೆಂಪಣ್ಣ ಆಯೋಗದ ವರದಿಯನ್ನು ಮಂಡಿಸುವ ಅವಶ್ಯಕತೆಯೇ ನಮ್ಮ ಸರ್ಕಾರಕ್ಕೆ ಇರಲಿಲ್ಲ. ಯಾಕೆ ವರದಿ ಮಂಡಿಸಲಿಲ್ಲ ಎಂದು ಆರೋಪ ಮಾಡಿದವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿಯೇ ಆ ವರದಿ ಬಂದು ವರದಿಯನ್ನು ಎರಡು ಭಾಗ ಮಾಡಿ ಯಾವುದು ಕ್ರಿಮಿನಾಲಿಟಿ ಇತ್ತು. ಅದನ್ನು ತನಿಖೆ ಮಾಡಿ ಕೆಂಪಯ್ಯ ವರದಿ ಕೊಟ್ಟಿದ್ದರಿಂದ ಮತ್ತೊಮ್ಮೆ ಮರುತನಿಖೆ ಮಾಡಿ ಸಮಯ ಹಾಳು ಮಾಡುವುದು ಬೇಡ ಎಂದು ಮುಂದಿನ ಕ್ರಮಕ್ಕೆ ಕಾನೂನು ಇಲಾಖೆಗೆ ಕಳಿಸಿದ್ದು, ಅಭಿಪ್ರಾಯದ ವರದಿ ಪಡೆದು ಅನುಷ್ಠಾನ ಮಾಡಲು ಹೇಳಿದ್ದೇವೆ" ಎಂದರು.
ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಗೊಂದಲವಿಲ್ಲ: "ಜುಲೈ 3ಕ್ಕೆ ಅಧಿವೇಶನ ಇದೆ. ಅದಕ್ಕೂ ಮೊದಲು ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿಯನ್ನೇ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡುವ ಪದ್ಧತಿ ಇಲ್ಲ. ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಆದರೆ ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಆದಷ್ಟು ಬೇಗ ನೇಮಕ ಆಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಬಿಜೆಪಿ ನಡುವೆ ಅನ್ನಭಾಗ್ಯ ಅಕ್ಕಿ ವಾರ್: ಸಿದ್ದು ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು