ಬೆಂಗಳೂರು: ಕೋವಿಡ್ ಸ್ಥಿತಿಗತಿ ಮತ್ತು ಬೇಸಿಗೆ ಸಂದರ್ಭದಲ್ಲಿ ಜನರ ರಕ್ಷಣೆ ಬಗ್ಗೆ ಈಗಾಗಲೇ ಸಲಹೆ ಕೊಡಲಾಗಿದೆ. ದೇಶದ ಪರಿಸ್ಥಿತಿ ಗಮನಿಸಿದರೆ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತನಾಡಿ ರಾಜ್ಯದಲ್ಲಿ ತಪಾಸಣೆ ಹೆಚ್ಚು ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಯಿಂದ ನಡೆದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ರಾಜ್ಯದಲ್ಲಿ ತಪಾಸಣೆ ಜಾಸ್ತಿ ಮಾಡಿದ್ದೇವೆ. ಮೂರನೇ ಡೋಸ್ ಪಡೆದಿಲ್ಲದವರು ಬೇಗ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿರೀಕ್ಷೆ ಮೀರಿ ತಾಪಮಾನ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಎಳೆನೀರು, ಮಜ್ಜಿಗೆ, ತಂಪು ಪಾನೀಯ ಕುಡಿಯಬೇಕು. ಬೆಳಗ್ಗೆ 11-12 ರಿಂದ ಮಧ್ಯಾಹ್ನ 3ರ ವರೆಗೆ ಬಿಸಿಲಿನಲ್ಲಿ ಜಾಸ್ತಿ ಇರಬಾರದು ಎಂದು ಅರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಏಪ್ರಿಲ್ನಲ್ಲೇ ಈ ರೀತಿ ಆದರೆ ಮೇ ವೇಳೆಗೆ ಇನ್ನೂ ಬಿಗಡಾಯಿಸಬಹುದು. ಅಗತ್ಯ ಇದ್ದರೆ ಒ.ಆರ್.ಎಸ್ ಪ್ಯಾಕೆಟ್ಸ್ ಇಟ್ಟು ಕೊಳ್ಳಬೇಕು. ತಾಪಮಾನ ಹೆಚ್ಚಳದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಈಗಾಗಲೇ ಮಾತನಾಡಿದ್ದೇನೆ ಎಂದು ಸಚಿವರು ಹೇಳಿದರು.
ಜೆಡಿಎಸ್ ಪ್ರಣಾಳಿಕೆಯಲ್ಲಿನ ಅಂಶಗಳು ಅವಾಸ್ತವ:ಹೋಟೆಲ್ ಉದ್ದಿಮಿಗಳನ್ನು ಭೇಟಿ ಮಾಡಿ ತುಂಬಾ ಖುಷಿಯಾಗಿದೆ. ಬಿಜೆಪಿ ಪಕ್ಷ ಎಲ್ಲ ಜನರ ಜೊತೆ ಬೆರತು ಅಭಿಪ್ರಾಯ ಸಂಗ್ರಹಿಸುತ್ತಿದೆ. ಭಾರತದಲ್ಲಿ ಬಿಜೆಪಿಯೊಂದೇ ಜನರ ಬಳಿ ಹೋಗಿ ಅವರ ಅಭಿಪ್ರಾಯ ತಿಳಿದು ಪ್ರಣಾಳಿಕೆ ಮಾಡುತ್ತಿದೆ ಎಂದರು. ನೈಜತೆಯಿಂದ ಕೂಡಿರುವ ಪ್ರಣಾಳಿಕೆಯನ್ನ ಬಿಡುಗಡೆ ಮಾಡಬೇಕು. ಜೆಡಿಎಸ್ ಪ್ರಣಾಳಿಕೆಯಲ್ಲಿ ಇರುವ ಅಂಶಗಳು ಯಾವುದೇ ಕಾರಣಕ್ಕೂ ವಾಸ್ತವದಲ್ಲಿ ಆಗುವುದಿಲ್ಲ. ಇನ್ನೊಂದು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಆ ಯಾತ್ರೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೈಟೆಕ್ ಆಸ್ಪತ್ರೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ನಾನು ಒಬ್ಬ ಆರೋಗ್ಯ ಸಚಿವನಾಗಿ ಹೇಳುತ್ತಿದ್ದೇನೆ. ಪ್ರತಿ ತಾಲೂಕಿನಲ್ಲೇ ಆಸ್ಪತ್ರೆಯನ್ನು ಮಾಡುವುದೇ ಕಷ್ಟವಿದೆ. ಪಂಚಾಯಿತಿಗಳಲ್ಲಿ ಆಸ್ಪತ್ರೆ ತೆರೆಯಲು ಸಾಧ್ಯವಿಲ್ಲ ಎಂದು ಸುಧಾಕರ್ ಹೇಳಿದರು.
ಈಡೇರಿಸುವ ಭರವಸೆ ಅಷ್ಟೇ ಪ್ರಣಾಳಿಕೆಯಲ್ಲಿ:ಮುಂದಿನ ದಿನಗಳಲ್ಲಿ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವವರ ಬಳಿ ಕೂಡ ಚರ್ಚೆ ಮಾಡುತ್ತೇವೆ. ಇಲ್ಲಿ ಕೊಟ್ಟಿರುವ ಸಲಹೆಗಳನ್ನ ನೋಡಿದ್ದೇನೆ ಹೋಟೆಲ್ ಉದ್ದಿಮೆ ತೆರೆಯಲು ಲೈಸೆನ್ಸ್ ತೆಗೆದುಕೊಳ್ಳುವುದೇ ಕಷ್ಟವಾಗಿದೆ. ಅದರಿಂದ ಸುಲಭವಾಗಿ ನಿಮಗೆ ಲೈಸೆನ್ಸ್ ಅನ್ನು ಒಂದೇ ಸೂರಿನಡಿ ಕೊಡುವುದರ ಬಗ್ಗೆ ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ. ಕೊಟ್ಟಿರುವ ಎಲ್ಲ ಸಲಹೆಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸುಮ್ಮನೆ ನಾವು ಭರವಸೆ ನೀಡುವುದಿಲ್ಲ. ಯಾವ ಬೇಡಿಕೆ ಈಡೇರಿಸಲು ಸಾಧ್ಯವೋ ಆ ಬೇಡಿಕೆಯನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದರು.
ಹೋಟೆಲ್ ಉದ್ಯಮ ಬಿಜೆಪಿ ಒಂದೇ ನಾಣ್ಯದ ಎರಡು ಮುಖ:ಸಭೆಯ ಬಳಿಕ ಮಾತನಾಡಿದ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಹೋಟೆಲ್ ಉದ್ಯಮ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದರು. ವಿರೋಧ ಪಕ್ಷದವರು ಸಮಸ್ಯೆ ತೆಗೆದುಕೊಂಡು ನಮ್ಮ ಬಳಿ ಯಾಕೆ ಬರ್ತಿರಾ ಎನ್ನುತ್ತಾರೆ. ನಾನು ಅವರಿಗೆ ವೈಯಕ್ತಿಕವಾಗಿ ಹೇಳುತ್ತೇನೆ. ನಾನು ಬಿಜೆಪಿ, ನಮ್ಮ ಅಪ್ಪ ಬಿಜೆಪಿ, ನಮ್ಮ ತಾತಾ ಬಿಜೆಪಿ ಮುಂದೆಯೂ ಬಿಜೆಪಿಯೇ. ಜಿ.ಎಸ್.ಟಿ ಹೆಚ್ಚಳ ಮಾಡಿದಾಗ ನಮ್ಮ ಸಂಘಟನೆಯಿಂದ ಮನವಿಯನ್ನು ಸಲ್ಲಿಸಿದ್ದೆ. ತಕ್ಷಣಕ್ಕೆ ಜಿ.ಎಸ್.ಟಿ 5% ಕಡಿಮೆ ಮಾಡಲಾಯಿತು. ಜನರ ಮಾತಿಗೆ ಬೆಲೆ ಕೊಡುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು.
ಸೋಮವಾರ ನಡೆದ ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಸೇರಿದಂತೆ ಬಿಬಿಎಂಪಿ ಹೋಟೆಲ್ ಮಾಲೀಕರು ಭಾಗಿಯಾಗಿದ್ದರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಈ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿಗೆ ಸಲಹೆ ಪಟ್ಟಿಯನ್ನು ಸಲ್ಲಿಸಿತು.
ಸಂವಾದದಲ್ಲಿ ಹೋಟೆಲ್ ಮಾಲೀಕರ ಬೇಡಿಕೆಗಳು:
1. ಬೆಂಗಳೂರು ನಗರದಲ್ಲಿ ಹೋಟೆಲ್ ಬರುವವರಿಗೆ ಟ್ರಾಫಿಕ್ ಕಿರಿ ಕಿರಿ ಉಂಟಾಗದಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
2. ಯಾವುದೇ ಲೈಸೆನ್ಸ್ ಪಡಿಯಲು ಆನ್ ಲೈನ್ ವ್ಯವಸ್ಥೆ ಮಾಡಬೇಕು.
3. ಫುಡ್ ಸ್ಟ್ರೀಟ್ ವೆಂಡರ್ ಗಳಿಗೆ ಸರ್ಕಾರದಿಂದ ನಿಯಮಗಳನ್ನು ಹಾಕಬೇಕು
4. ಸರ್ಕಾರದಿಂದ 5% ಜಿ.ಎಸ್.ಟಿ ಹೊಟೇಲ್ ಉದ್ಯಮಕ್ಕೆ ಇದ್ದು, ಆದರೆ ಒಟ್ಟಾರೆಯಾಗಿ 18% ಗಿಂತ ಹೆಚ್ಚು ಜಿ.ಎಸ್.ಟಿ ಕಟ್ಟುತ್ತಿದ್ದೇವೆ. ಈ ಹೊರೆಯನ್ನು ಕಡಿತಗೊಳಿಸಲು ಒತ್ತಾಯ.
5. ಗ್ಯಾಸ್ ದರವನ್ನು 200 ರಿಂದ 300 ರೂಪಾಯಿ ಕಡಿಮೆ ಮಾಡಬೇಕೆಂಬ ಮನವಿ.
ಇದನ್ನೂ ಓದಿ:ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ