ಬೆಂಗಳೂರು: ಗಲಭೆ ಮಾಡಿದ ಆರೋಪಿಗಳ ಮನೆಗೆ ಒಬ್ಬ ಮಾಜಿ ಸಚಿವ ಹೋಗ್ತಾರೆ ಅಂದ್ರೆ ಇದರ ಹಿಂದೆ ಯಾರಿದ್ದಾರೆ ಅಂತ ಸ್ಪಷ್ಟವಾಗುತ್ತದೆ ಎಂದು ಸಚಿವ ಡಾ. ಕೆ. ಸುಧಾಕರ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಗಲಭೆಕೋರರ ಮನೆಗೆ ಜಮೀರ್ ಭೇಟಿ: ಘಟನೆ ಹಿಂದೆ ಯಾರಿದ್ದಾರೆಂದು ಗೊತ್ತಾಗುತ್ತಿದೆ ಎಂದ ಸುಧಾಕರ್
ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರ ಮನೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿದ್ದಕ್ಕೆ ಸಚಿವ ಸುಧಾಕರ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈ ತರದ ಕೃತ್ಯಗಳನ್ನು ನಾವು ನೋಡಿರಲಿಲ್ಲ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಇಂಥ ಮನೋಧೋರಣೆಯನ್ನು ಕಾಂಗ್ರೆಸ್ಸಿಗರು ಬಿಡಬೇಕು. ಇಲ್ಲದಿದ್ದರೆ ರಾಜ್ಯದ ಜನ ಇವರನ್ನು ಕ್ಷಮಿಸುವುದಿಲ್ಲ. ಖಾಸಗಿ, ಸರ್ಕಾರಿ ಆಸ್ತಿಪಾಸ್ತಿ ನಷ್ಟ ಮಾಡುವ ಅಧಿಕಾರ ಯಾರಿಗೂ ಇಲ್ಲ. ಆರೋಪಿಗಳಿಂದಲೇ ನಷ್ಟ ಭರ್ತಿ ಮಾಡಿಸೋದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಬಳಿಕ ಸಚಿವ ಗೋಪಾಲಯ್ಯ ಮಾತನಾಡಿ, ದುಷ್ಟಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ದಾಂಧಲೆ ನಡೆಸಿವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ದುಷ್ಕರ್ಮಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಕಾನೂನು ರಚಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.