ಬೆಂಗಳೂರು: ನಗರದ ಮಲ್ಲೇಶ್ವರಂ ಕಾಲೇಜು ಒಂದರಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಿಸಲಾಗಿದ್ದು, ಹಿಜಾಬ್ ತೆಗೆದು ಕೇಂದ್ರದೊಳಗೆ ತೆರಳಿದ ಬಳಿಕವೇ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಬರುವಂತಿಲ್ಲ. ಸಮವಸ್ತ್ರ ಸಂಹಿತೆ ಪಾಲನೆಯಾಗಲಿದೆ. ಇದರಿಂದ ವಸ್ತ್ರಸಂಹಿತೆ ಪಾಲನೆ ಆಗದಿದ್ದರೆ ಅಂತಹವರಿಗೆ ಪರೀಕ್ಷೆ ಬರೆಯುವ ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಸೂಚನೆ ನೀಡಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಾ ಇದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ಯಾವುದೇ ರೀತಿಯಲ್ಲೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬರುವಂತಿಲ್ಲ. ಅಂಥವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗದು. ಪರೀಕ್ಷೆ ಬರೆಯುವ ಆಶಯ ಇದ್ದವರು ಹಿಜಾಬ್ ತೆಗೆದಿಟ್ಟು ಬರುವಂತೆ ಕಟ್ಟುನಿಟ್ಟಾಗಿ ತಿಳಿಸಿದ್ದರು. ಶಿಕ್ಷಣ ಸಂಸ್ಥೆಗಳಿಗೂ ನಿಯಮ ಪಾಲನೆ ಮಾಡುವಂತೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮಲ್ಲೇಶ್ವರಂನ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದರೆ ಕೂರಲು ಅವಕಾಶ ನೀಡುವುದಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದ್ದರು. ಕಡೆ ಕ್ಷಣದವರೆಗೂ ವಿದ್ಯಾರ್ಥಿನಿ ಹಿಜಾಬ್ ತೆಗೆಯಲು ನಿರಾಕರಿಸುತ್ತಲೇ ಇದ್ದರು. ಪರೀಕ್ಷೆ ಆರಂಭವಾಗುವ ಕೆಲ ನಿಮಿಷ ಮುನ್ನ ಆಕೆಯ ಮನವೊಲಿಸಿ ಹಿಜಾಬ್ ತೆಗೆಸಿ ಪರೀಕ್ಷೆ ಕೇಂದ್ರದೊಳಗೆ ಕಳುಹಿಸಿಕೊಡಲಾಯಿತು. ವಿದ್ಯಾರ್ಥಿನಿ ಸದ್ಯ ಪರೀಕ್ಷೆ ಬರೆಯುತ್ತಿದ್ದು, ಕೇಂದ್ರವೂ ಸೇರಿದಂತೆ ನಗರದ ಯಾವುದೇ ಭಾಗದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ನಿರಾಕರಣೆಗೆ ಒಳಗಾದ ಪ್ರಕರಣ ವರದಿಯಾಗಿಲ್ಲ.
ಸಚಿವರೇ ಮಾಹಿತಿ ನೀಡಿದ್ದರು: ಹೈಕೋರ್ಟ್ ಆದೇಶ ಪಾಲನೆ ಹಾಗೂ ಕಳೆದ ವರ್ಷ ಕೈಗೊಂಡಿರುವ ನಿರ್ಧಾರಕ್ಕೆ ಬದ್ಧವಾಗಿರಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಈ ಸಾರಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗೆ ಬರುವವರಿಗೆ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತೀರ್ಮಾನಿಸಿತ್ತು. ಸ್ವತಃ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಿದ್ದು, ಕಳೆದ ವರ್ಷ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಈ ವರ್ಷವೂ ಬದ್ಧವಾಗಿದೆ. ಅಲ್ಲದೇ ವಸ್ತ್ರಸಂಹಿತೆ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ಅದರ ಪಾಲನೆ ಮಾಡಲಿದ್ದೇವೆ. ಹಿಜಾಬ್ ಧರಿಸಿ ಕೇಂದ್ರದೊಳಗೆ ತೆರಳಲು ಅವಕಾಶ ಇಲ್ಲ ಎಂದಿದ್ದರು.