ಬೆಂಗಳೂರು: ಎಂಟು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ನಾಯಕ ಎನ್ನುವ ಕಾರಣಕ್ಕೆ ಉಮೇಶ್ ಕತ್ತಿಗೆ ಆಹಾರ ಖಾತೆ ಕೊಡಬೇಕಾಯಿತು. ಸಿಎಂ ಪಕ್ಷಕ್ಕೆ ಹೆಸರು ತರುವ ರೀತಿ ಅಬಕಾರಿ ಖಾತೆ ನಿರ್ವಹಿಸುತ್ತೇನೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ನನಗೆ ಕೊಟ್ಟಿರುವ ಅಬಕಾರಿ ಖಾತೆ ಸಂತೋಷ ತಂದಿದೆ: ಸಚಿವ ಗೋಪಾಲಯ್ಯ - Minister Gopalayya
ಮುಖ್ಯಮಂತ್ರಿಗಳು ನನ್ನನ್ನು ಕರೆಸಿದ್ದರು. ಕಂದಾಯ ಸಚಿವರು, ಗೃಹ ಸಚಿವರು ಕೂಡ ಜೊತೆಗಿದ್ದರು. ಇಲ್ಲಿಯವರೆಗೂ ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದೀರಿ. ನಿಮಗೆ ಬೇಕಿರುವ ಖಾತೆಯನ್ನು ಭವಿಷ್ಯದಲ್ಲಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟೀಕರಣ ನೀಡಿ ಭವಿಷ್ಯದಲ್ಲಿ ಉತ್ತಮ ಖಾತೆ ಕೊಡುವ ಭರವಸೆ ನೀಡಿದ್ದಾರೆ. ಹಣ ಇದ್ದರೆ ಮಾತ್ರ ಎಲ್ಲಾ ಇಲಾಖೆಗಳನ್ನು ನಡೆಸಲು ಸಾಧ್ಯ. ಈಗ ನನಗೆ ಸಿಕ್ಕಿರುವ ಅಬಕಾರಿ ಖಾತೆ ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ಖಾತೆಯಾಗಿದೆ.
ಈ ಖಾತೆ ಕೊಟ್ಟಂತಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೃತಜ್ಞನಾಗಿದ್ದೇನೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಕಳೆದ ಹನ್ನೊಂದು ತಿಂಗಳು ಆತ್ಮಸಾಕ್ಷಿಯಾಗಿ ನಾನು ಕೆಲಸ ಮಾಡಿದ್ದೇನೆ. ನನ್ನ ಇಲಾಖೆಯ ಅಧಿಕಾರಿಗಳು, ಮುಖ್ಯಮಂತ್ರಿಗಳು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದರು.