ಬೆಂಗಳೂರು:ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಸಂಕಷ್ಟ ತಂದೊಡ್ಡಿತ್ತು. ಇಂದೂ ಸಹ ನಗರದ ಹಲವೆಡೆ ಮಳೆಯಾಗಿದೆ. ಹೀಗಾಗಿ, ವಾಹನ ಸವಾರರು ಸೇರಿ ಜನತೆ ಪರದಾಡುವಂತಾಗಿತ್ತು. ಈಗಾಗಲೇ ಜುಲೈ 18ರ ವರೆಗೆ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೆಡ್ ಅಲರ್ಟ್ ಎಲ್ಲೆಲ್ಲಿ..?
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. .
ಉತ್ತರ ಕನ್ನಡ:ಜಿಲ್ಲೆಯಲ್ಲಿ ಸತತ 4 ದಿನಗಳಿಂದ ಮಳೆ ಸುರಿಯುತ್ತಿದ್ದು, ಗಾಳಿ ಸಹಿತ ಮಳೆಗೆ ಜನರು ಕಂಗಾಲಾಗಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲೂ ಭಾರಿ ಮಳೆಯಾಗುತ್ತಿದ್ದು ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದೆ. ಭಾರಿ ಮಳೆಯಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಕಡಲಿಗೆ ತೆರಳದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.
ರಾಜ್ಯದ ಹಲವೆಡೆ ಧಾರಾಕಾರ ಮಳೆ ಬಂಟ್ವಾಳ: ತಾಲೂಕಿನಾದ್ಯಂತ ವರುಣಾರ್ಭಟ ಜೋರಾಗಿದೆ. ಇಲ್ಲಿನ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ ಕಂಡಿದೆ. ಭಾರೀ ಮಳೆಗೆ ಪೆರಾಜೆ ಗ್ರಾಮದ ಏನಾಜೆ ಎಂಬಲ್ಲಿ ಕಾಂತಪ್ಪ ಕುಲಾಲ್ ಅವರ ಮನೆಗೆ ಭಾಗಶಃ ಹಾನಿ ಉಂಟಾಗಿದೆ. ನಾವೂರು ಗ್ರಾಮದ ಸೆಬಾಸ್ಟಿಯನ್ ಆಲ್ಪುಕರ್ಕ್ ಎಂಬುವರ ಮನೆ ಕುಸಿದುಬಿದ್ದಿದೆ. ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ಮಹಮ್ಮದ್ ಎಂಬವರ ಮನೆಗೆ ಹಾನಿ ಆಗಿದೆ.
ಉಳ್ಳಾಲದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸೋಮೇಶ್ವರ ಸಮುದ್ರ ಪ್ರಕ್ಷುಬ್ದಗೊಂಡಿದೆ. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಒಳರಸ್ತೆ ಸಮುದ್ರ ಪಾಲಾದರೆ, ಉಳ್ಳಾಲ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಾಂಪೌಂಡ್ ಕುಸಿತ ಸೇರಿದಂತೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ. ಜೊತಗೆ ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಮೊದಲ ಬಾರಿಗೆ ಮುಳುಗಡೆಯಾಗಿದೆ. ಬೆಳಗ್ಗೆಯಿಂದ ವಿಪರೀತ ಸುರಿದ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ತೊಡಕಾಗಿತ್ತು.
ಶಿವಮೊಗ್ಗ: ಮಳೆನಾಡು ಭಾಗದಲ್ಲೂ ಮಳೆ ಮುಂದುವರಿದಿದೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 21 ಸೆಂಟಿ ಮೀಟರ್ ಮಳೆಯಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ 47.808 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 155 ಮೀ.ಮೀಟರ್ ಮಳೆಯಾಗಿದೆ. ಹೊಸನಗರದ ಮಾಣಿಯಲ್ಲಿ 194 ಮಿಮೀ, ಯಡೂರಿನಲ್ಲಿ 166 ಮಿಮೀ, ಮಳೆಯಾಗಿದೆ.
ಚಿಕ್ಕಮಗಳೂರು: ಇತ್ತ ಚಿಕ್ಕಮಗಳೂರಲ್ಲೂ ಧಾರಾಕಾರ ಮಳೆ ಮುಂದುವರೆದಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ಜನರಲ್ಲಿ ಆತಂಕ ಮೂಡಿದೆ. ಭಾರೀ ಮಳೆಯಿಂದಾಗಿ ಇಲ್ಲಿನ ಹೊನ್ನಾಳ ಚೆಕ್ ಪೋಸ್ಟ್ ಬಳಿ ರಸ್ತೆ ಬಿರುಕು ಬಿಟ್ಟಿದೆ. ಚಿಕ್ಕಮಗಳೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಜೊತೆಗೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ.