ಕರ್ನಾಟಕ

karnataka

ETV Bharat / state

ಕೊರೊನಾ ಪರೀಕ್ಷೆಗಾಗಿ 2 ಲಕ್ಷ ಹೆಚ್ಚುವರಿ ಕಿಟ್​ ಖರೀದಿಸಲು ರಾಜ್ಯ ಸರ್ಕಾರ ನಿರ್ಧಾರ - ಪಿಪಿಇ

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್​ ನಾರಾಯಣ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

State government to buy 2 lakh additional kits for Corona test
ಕೊರೊನಾ ಪರೀಕ್ಷೆಗಾಗಿ 2 ಲಕ್ಷ ಹೆಚ್ಚುವರಿ ಕಿಟ್​ಗಳನ್ನು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನ

By

Published : Apr 16, 2020, 10:07 PM IST

ಬೆಂಗಳೂರು: ಕೋವಿಡ್-19 ಪತ್ತೆಗಾಗಿ ಹೆಚ್ಚುವರಿಯಾಗಿ 2 ಲಕ್ಷ ಟೆಸ್ಟ್ ಕಿಟ್‍ಗಳನ್ನು ಖರೀದಿಸಲು ಕೋವಿಡ್ ಕುರಿತ ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್​ ನಾರಾಯಣ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಚೀನಾ ಸರ್ಕಾರ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೇ ಟೆಸ್ಟ್ ಕಿಟ್‍ಗಳನ್ನು ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದು, ಅವು ಬಂದ ನಂತರ ಟೆಸ್ಟ್​​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಕೋವಿಡ್ ರೋಗ ಲಕ್ಷಣಗಳು ಇರುವ ವ್ಯಕ್ತಿಯ ಕಫದ ಮಾದರಿಗಳನ್ನು ಸಂಗ್ರಹಿಸಲು ರಾಜ್ಯದಲ್ಲಿ 250 ಕಿಯೋಸ್ಕ್​ಗಳನ್ನು ಸ್ಥಾಪಿಸಲಾಗುವುದು. ಇಂತಹ ಕಿಯೋಸ್ಕ್​​ಗಳು ತಾಲೂಕಿಗೆ ಒಂದರಂತೆ ಆರಂಭಿಸಲು ನಿರ್ಧರಿಸಲಾಗಿದೆ.

ವೈದ್ಯರ ರಕ್ಷಣಾ ಕವಚಗಳು (ಪಿಪಿಇ) ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅಗತ್ಯ ಇರುವ 25 ಸಾವಿರ ಆರ್​​​​​ಟಿಪಿಸಿಆರ್ ಕಿಟ್‍ಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ.

ಇನ್ನು ಜಿಲ್ಲಾ ಆಸ್ಪತ್ರೆ ಗಳಲ್ಲಿ ಕನಿಷ್ಠ 50ರಿಂದ 100 ಹಾಸಿಗೆಗಳಿಗೆ ಕೇಂದ್ರಿಕೃತ ಆಮ್ಲಜನಕ ಸರಬರಾಜು ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ರಕ್ತ/ಕಫಾ ಮಾದರಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಡಾ. ಸುದರ್ಶನ್​ ನೇತೃತ್ವದ ತಂಡ ಕೊಟ್ಟಿರುವ ವರದಿಯನ್ನು ಅಂಗೀಕರಿಸಲಾಯಿತು. ಕೋವಿಡ್ ರೋಗಿಗಳಿಗೆ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಕೆ.ಸಿ. ಜನರಲ್ ಸೇರಿದಂತೆ ಬೇರೆ ಮಾಮೂಲಿ ರೋಗಿಗಳು ಹೋಗುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದು ಎನ್ನುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

ಕೋವಿಡ್ ಸಲುವಾಗಿಯೇ ಪ್ರತ್ಯೇಕ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ‌. ಈ ಸಹಾಯವಾಣಿ ಮೂಲಕ ಕನಿಷ್ಠ 300 ಜನರು, 50 ಸಾವಿರ ಕರೆ ಸ್ವೀಕರಿಸಲಿದ್ದಾರೆ. ಇನ್ನು ದೆಹಲಿಯ ತಬ್ಲೀಘಿ ಜಮಾತ್ ಮತ್ತು ನಂಜನಗೂಡಿನ ಜೂಬಿಲಂಟ್​ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೇಸಿಂಗ್ ಪೂರ್ಣವಾಗಿದ್ದು, ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details