ಬೆಂಗಳೂರು: ನಾಲ್ವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಇಂದು ಆದೇಶ ಹೊರಡಿಸಿದೆ. ಪೊಲೀಸ್ ಹೆಡ್ ಕ್ವಾರ್ಟರ್ಸ್ ಐಜಿಪಿಯಾಗಿದ್ದ ಎಸ್.ಎನ್.ಸಿದ್ದರಾಮಪ್ಪ ಅವರನ್ನ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿದ್ದ ಡಿ.ಆರ್.ಸಿರಿಗೌರಿ ಅವರನ್ನ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಸ್ಟೇಟ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಎಸ್ಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನ ನೂತನ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಡಾ.ಅನೂಪ್.ಎ ಶೆಟ್ಟಿಯವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿರುವುದರಿಂದ, ಅವರನ್ನು ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ:ಇನ್ನು ರಾಜ್ಯ ಸರ್ಕಾರ ಜು.10 ರಂದು ಆಯುಷ್ ಇಲಾಖೆ ಆಯುಕ್ತ ಮಂಜುನಾಥ್ ಸೇರಿದಂತೆ ಒಟ್ಟು 9 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆಯುಷ್ಯ ಇಲಾಖೆಯ ಆಯುಕ್ತರಾಗಿದ್ದ ಮಂಜುನಾಥ್ ಅವರನ್ನು ಸರ್ವೇ ಇತ್ಯರ್ಥ ಮತ್ತು ಭೂಮಿ ದಾಖಲೆಗಳ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀಮತಿ ಸತ್ಯಭಾಮ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಗ್ರಾಮೀಣ ಅಭಿವೃದ್ಧಿ ಇಲಾಖೆಯ ಆಯುಕ್ತರಾಗಿದ್ದ ಶ್ರೀಮತಿ ಶಿಲ್ಪ ನಾಗ ಅವರನ್ನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಾಗಿತ್ತು. ಬಾಗಲಕೋಟೆಯ ಜಿಲ್ಲಾ ಪಂಚಾಯತಿ ಸಿಇಒ ಆಗಿದ್ದ ಭೂಬಲನ್ ಅವರನ್ನು ವಿಜಯಪುರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ತುಮಕೂರಿನ ನಗರಸಭೆಯ ಆಯುಕ್ತರಾಗಿದ್ದ ದರ್ಶನ ಹೆಚ್ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿತ್ತು. ಹುದ್ದೆಯ ನಿರೀಕ್ಷೆಯಲ್ಲಿದ್ದ ಅನುರಾಧ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆ ಮಾಡಲಾಗಿತ್ತು. ರಾಜ್ಯದ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀಮತಿ ಪದ್ಮ ಬಸವಂತಪ್ಪ ಅವರನ್ನು ಕೋಲಾರ ಜಿಲ್ಲಾ ಪಂಚಾಯತಿಯ ಸಿಇಓ ಆಗಿ ವರ್ಗಾವಣೆ ಮಾಡಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ಆಗಿದ್ದ ವರ್ಣಿತ್ ನೇಗಿಯವರನ್ನು ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗಾಯಿಸಲಾಗಿತ್ತು. ಹಂಪಿ ವಿಶ್ವ ಪರಂಪರೆ ನಿರ್ವಹಣೆ ಪ್ರಾಧಿಕಾರದ ಆಯುಕ್ತರಾಗಿದ್ದ ಎನ್ ಎಂ ಅಲಿ ಅಕ್ರಮ್ ಶಾ ಅವರನ್ನು ಹೊಸಪೇಟೆ ವಿಭಾಗದ ಉಪವಿಭಾಗಾಧಿಕಾರಿಯನ್ನಾಗಿ ಟ್ರಾನ್ಸ್ಫರ್ ಮಾಡಲಾಗಿತ್ತು.
ಈ ಹಿಂದೆ 14 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ: ಕಳೆದ ತಿಂಗಳು ಜೂನ್ 19 ರಂದು ರಾಜ್ಯ ಸರ್ಕಾರ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಈ ಸಂದರ್ಭದಲ್ಲಿ ಜಾವೇದ್ ಅಖ್ತರ್ ಅವರನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಬಿ.ಸಿ ಸತೀಶ್ ಅವರನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶರಾಗಿ ವರ್ಗಾವಣೆ ಮಾಡಲಾಗಿತ್ತು. ಡಾ.ಎಚ್.ಎನ್ ಗೋಪಾಲಕೃಷ್ಣ ಅವರನ್ನು ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿಯ ಜಂಟಿ ನಿರ್ದೇಶಕರಾಗಿ, ಡಾ.ಎನ್ ಶಿವಶಂಕರ ಅವರನ್ನು ಬೆಂಗಳೂರು ಗ್ರಾಮಾಂತರದ ಜಿಲ್ಲಾಧಿಕಾರಿಯಾಗಿ, ಅಕ್ರಂ ಪಾಷಾ ಅವರನ್ನು ಕೋಲಾರದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ:Job Alert: ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಹುದ್ದೆಗಳು; ವಾಕ್ ಇನ್ ಇಂಟರ್ವ್ಯೂ