ಬೆಂಗಳೂರು: ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯು ಜೂನ್ 25 ರಿಂದ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ, ಸಭೆಯ ತೀರ್ಮಾನದಂತೆ ಪರೀಕ್ಷೆ ಮಾರ್ಗಗಳಲ್ಲಿ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್ಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲು ಸೂಚನೆ ನೀಡಲಾಗಿದೆ.
ಈ ಸಂಬಂಧ ಎಸ್ಎಸ್ಎಲ್ಸಿ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒದಗಿಸುವ ಹೆಚ್ಚುವರಿ ಬಸ್ಗಳಿಗೆ ವಿಶೇಷ ದರಗಳಂತೆ ಪ್ರತಿ ಬಸ್ಗೆ ರೂ. 5000 ರಂತೆ (ಇಂಧನ ವೆಚ್ಚವನ್ನು ಮಾತ್ರ) ದರ ವಿಧಿಸಲು ತೀರ್ಮಾನಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪಿಯು ಉಪನಿರ್ದೇಶಕರ ಸಹಕಾರಕ್ಕೆ ಮನವಿ:
ಜೂ. 25 ರಿಂದ ಜುಲೈ 4 ರವರೆಗೆ ನಡೆಯುವ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜು ಪ್ರಾಂಶುಪಾಲರುಗಳು ಅಗತ್ಯ ಸಹಕಾರ ನೀಡುವಂತೆ ಸೂಚಿಸಲಾಗಿದೆ.
ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷಾ ಸಮಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರುಗಳು ಕೆಲವು ಕ್ರಮಗಳನ್ನ ಕೈಗೊಳ್ಳಬೇಕಿದೆ.
ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಉಪಯೋಗಿಸಿದ ಥರ್ಮಲ್ ಗನ್ಗಳನ್ನು ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಉಪಯೋಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರುಗಳಿಗೆ ಹಸ್ತಾಂತರಿಸಿ ಪರೀಕ್ಷೆ ಮುಗಿದ ಬಳಿಕ ಹಿಂಪಡೆಯುವಂತೆ ಸಂಬಂಧಪಟ್ಟ ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರುಗಳು ಕ್ರಮವಹಿಸಲು ಸೂಚಿಸಿದೆ.