ಬೆಂಗಳೂರು: ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಇಲ್ಲದೇ ಪರದಾಡುತ್ತಿದ್ದ ರಾಜ್ಯದ 1300 ಕ್ಕೂ ಹೆಚ್ಚು ಭಕ್ತರಿಗೆ ತಿರುಪತಿ ದೇವಸ್ಥಾನಂ ಟ್ರಸ್ಟ್ ಸದಸ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಕಾಲದಲ್ಲಿ ಟಿಕೆಟ್ ವ್ಯವಸ್ಥೆ ಕಲ್ಪಿಸಿ ದೇವರ ದರ್ಶನ ಮಾಡಿಸಿ ಸಹಾಯ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ಲಿನ 1300 ಕ್ಕೂ ಹೆಚ್ಚು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ತಿರುಮಲಕ್ಕೆ ಕಳೆದ ವಾರ ಪಾದಯಾತ್ರೆ ಮೂಲಕ ಮಂಗಳವಾರ ರಾತ್ರಿ ತಿರುಪತಿಯನ್ನು ತಲುಪಿದ್ದರು. ಆದರೆ, ಮುಂಗಡವಾಗಿ ಟಿಕೆಟ್ ಪಡೆಯದಿದ್ದರಿಂದ ಅಲ್ಲಿಂದ ತಿರುಮಲ ಬೆಟ್ಟಕ್ಕೆ ಹತ್ತಲು ಅವರಿಗೆ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದ್ದರು.
ಆ ವೇಳೆ, ಪಾದಯಾತ್ರೆ ನೇತೃತ್ವ ವಹಿಸಿದ್ದ ಮುಖಂಡರು ಎಸ್.ಆರ್.ವಿಶ್ವನಾಥ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಆತಂಕವನ್ನು ತೋಡಿಕೊಂಡಿದ್ದರು. ಕೂಡಲೇ ವಿಶ್ವನಾಥ್ ಟಿಟಿಡಿ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ತಿರುಮಲದಲ್ಲಿರುವ ತಮ್ಮ ಆಪ್ತ ಸಹಾಯಕರಿಗೆ ಕರೆ ಮಾಡಿ ಪಾದಯಾತ್ರೆ ಮೂಲಕ ಬಂದಿರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.
ಬಳಿಕ ಅಲ್ಲಿದ್ದ ಸುಮಾರು1300 ಭಕ್ತರಿಗೂ ತಿರುಮಲ ಬೆಟ್ಟಕ್ಕೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸುವ ಟಿಕೆಟ್ ವ್ಯವಸ್ಥೆ ಮಾಡುವಂತೆ ಟಿಟಿಡಿ ನಿರ್ದೇಶನ ನೀಡಿದೆ. ವಿಶ್ವನಾಥ್ ಸೂಚನೆಯಿಂದಾಗಿ ತಿರುಮಲ ದೇವಸ್ಥಾನಂ ಅಧಿಕಾರಿಗಳು ಮಂಗಳವಾರ ರಾತ್ರಿಯೇ 800 ಭಕ್ತರಿಗೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದರೆ, ಉಳಿದ 500 ಭಕ್ತರಿಗೆ ಬುಧವಾರ ಬೆಳಗ್ಗೆ ಟಿಕೆಟ್ ಕಲ್ಪಿಸಿದರು ಎಂದು ಭಕ್ತರು ತಿಳಿಸಿದ್ದಾರೆ.