ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿಂಪಡೆಯುವಂತೆ ಸರ್ಕಾರ ಮನವೊಲಿಸುವ ಕಾರ್ಯ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಒತ್ತಾಯಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ನಿಲುವು ಪ್ರಕಟಿಸಿರುವ ಪಾಟೀಲ್, ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. ಸಾರಿಗೆ ಒಕ್ಕೂಟಗಳು ಕರೆ ನೀಡಿದ ನಂತರವೂ ಸರ್ಕಾರ ಮಾತುಕತೆಗೆ ಮುಂದಾಗದೇ ಇದ್ದಿದ್ದರಿಂದಲೇ ಇವತ್ತು ಜನಸಾಮಾನ್ಯರು ಬಸ್ಗಳಿಲ್ಲದೇ ಪರದಾಡುತ್ತಿದ್ದಾರೆ. ಸಾರಿಗೆ ನೌಕರರ ಒಕ್ಕೂಟದ ಜೊತೆ ಬಿ.ಎಸ್.ಯಡಿಯೂರಪ್ಪ ಹಾಗೂ ಲಕ್ಷ್ಮಣ ಸವದಿ ಮಾತುಕತೆ ನಡೆಸಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ದಿಢೀರ್ ನಡೆಯುತ್ತಿಲ್ಲ. ನೌಕರರ ಒಕ್ಕೂಟಗಳು ಒಂದು ವಾರದ ಮೊದಲೇ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದವು. ಜನಸಾಮಾನ್ಯರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸೋ ಪ್ರಯತ್ನ ನಡೆಸಬೇಕಿತ್ತು ಎಂದಿದ್ದಾರೆ.
ಹಟಮಾರಿ ಧೋರಣೆ
ಸಾರಿಗೆ ನೌಕರರ ಜತೆ ಕನಿಷ್ಠ ಸೌಜನ್ಯಕ್ಕಾದರೂ ಮಾತುಕತೆಗೆ ಮುಂದಾಗದ ಸರ್ಕಾರ ಏಕಾಏಕಿ ಖಾಸಗಿಯವರಿಂದ ಬಸ್ ಓಡಿಸುತ್ತೇವೆ ಎಂದು ಸಾರಿಗೆ ಒಕ್ಕೂಟಕ್ಕೆ ಸೆಡ್ಡು ಹೊಡೆದಿರೋದು ಹಠಮಾರಿ ಧೋರಣೆಯಲ್ಲದೇ ಮತ್ತೇನು..? ಎಷ್ಟು ದಿನ ಖಾಸಗಿಯವರನ್ನ ನಂಬಿ ಬಸ್ ಓಡಿಸಲು ಸಾಧ್ಯ..? ಇದರಿಂದ ತೊಂದರೆ ಅನುಭವಿಸುವವರು ಜನ ಸಾಮಾನ್ಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸರ್ವಾಧಿಕಾರಿ ಧೋರಣೆ
ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದಿದ್ದಾರೆ. ಈಗಿನ ಆರ್ಥಿಕ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಅನ್ನುವುದಾದರೆ ಮಾತುಕತೆಗೆ ಕರೆದು ಸರ್ಕಾರದಿಂದ ಸಾಧ್ಯವಾಗುವ ಪರಿಹಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಂದಿಡಬೇಕಿತ್ತು. ನಾವು ಮಾತುಕತೆಯನ್ನೇ ಮಾಡುವುದಿಲ್ಲ, ಬೇಕಿದ್ದರೆ ಎಸ್ಮಾ ಅಸ್ತ್ರ ಪ್ರಯೋಗಿಸುತ್ತೇವೆ ಅನ್ನೋ ಸರ್ಕಾರದ ವಾದ ಸರ್ವಾಧಿಕಾರಿ ಧೋರಣೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಈ ಕೂಡಲೇ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳನ್ನು ಮಾತುಕತೆಗೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಆಗ್ರಹಿಸುತ್ತೇನೆ. ಮಾತುಕತೆ ನಡೆದರೆ ಅಲ್ಲವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗೋದು. ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರೇ ಹಠ ಬಿಟ್ಟು ಮೊದಲು ಒಕ್ಕೂಟದ ಪ್ರತಿನಿಧಿಗಳ ಜೊತೆ ಮಾತುಕತೆ ಮಾಡಿ. ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರ ಒಕ್ಕೂಟ ಪ್ರತಿಭಟನೆಗಿಳಿದಿದ್ದಾಗ ನಾಲ್ಕೈದು ದಿನ ಜನ ಬಸ್ಗಳಿಲ್ಲದೇ ಪರದಾಡಿದ್ದರು. ಈಗ ಮತ್ತೆ ಅದೇ ಪುನರಾವರ್ತನೆಯಾಗುವುದು ಬೇಡ ಎಂದು ಸಲಹೆ ನೀಡಿದ್ದಾರೆ.