ಬೆಂಗಳೂರು:ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್ ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜೂ.6 ರಂದು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಮ್ಮ ತಂದೆ ದಿವಂಗತ ಎಸ್. ಆರ್. ಬೊಮ್ಮಾಯಿಯವರ 99 ಜನ್ಮ ದಿನಾಚರಣೆಯನ್ನು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜ್ಯುಕೇಶನ್ ಮತ್ತು ವೆಲ್ ಫೇರ್ ಫೌಂಡೇಶನ್ ವತಿಯಿಂದ ಜೂ.6 ರಂದು ಸಂಜೆ 5 ಗಂಟೆಗೆ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ದಿ.ಎಸ್. ಆರ್. ಬೊಮ್ಮಾಯಿಯವರ ಕುರಿತು 'ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್'ನವರು ಹೊರ ತಂದಿರುವ 'ಕಾಫಿ ಟೇಬಲ್' ಪುಸ್ತಕವನ್ನು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ಪದ್ಮವಿಭೂಷಣ ಎಸ್. ಎಂ ಕೃಷ್ಣ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಹಿಸಿಕೊಳ್ಳಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್, ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅವರು ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಭಟ್ ಅವರ ಗಾಯನ ಕಾರ್ಯಕ್ರಮ ಇದೆ ಎಂದು ತಿಳಿಸಿದ್ದಾರೆ.
ದೇಶದ ರಾಜಕಾರಣಕ್ಕೆ ಮಾದರಿಯಾದ ಎಸ್.ಆರ್. ಬೊಮ್ಮಾಯಿ ಪ್ರಕರಣ:ದೇಶದ ರಾಜಕೀಯ ಇತಿಹಾಸದಲ್ಲಿ "ಎಸ್.ಆರ್. ಬೊಮ್ಮಾಯಿ ಪ್ರಕರಣ" ಎಂದೇ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ. ಈ ಪ್ರಕರಣ ಕಳೆದ ಮೂರು ದಶಕಗಳಿಂದಲೂ ಇಂದಿಗೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
ಏನಿದು ಎಸ್.ಆರ್. ಬೊಮ್ಮಾಯಿ ಪ್ರಕರಣ?: ಎಸ್.ಆರ್. ಬೊಮ್ಮಾಯಿ ಅವರು ಆಗಸ್ಟ್ 13, 1988 ಮತ್ತು ಏಪ್ರಿಲ್ 1989ರ ನಡುವೆ ಕರ್ನಾಟಕದಲ್ಲಿ ಜನತಾದಳ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಏಪ್ರಿಲ್ ತಿಂಗಳಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ತಾವು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ಪತ್ರ ನೀಡಿದ್ದರು. ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಏಪ್ರಿಲ್ 20ರಂದು ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸ ಮತಯಾಚನೆಗೆ ಒಂದು ವಾರದ ಗಡುವು ಕೇಳಿದ್ದರು.