ಬೆಂಗಳೂರು/ಬೆಳಗಾವಿ:ಕರ್ನಾಟಕ ಎಂದು ಹೆಸರಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 'ಸುವರ್ಣ ಕರ್ನಾಟಕ ಸಂಭ್ರಮ' ರಾಜ್ಯದೆಲ್ಲೆಡೆ ಮನೆ ಮಾಡಿದೆ. ಈ ಸಂಭ್ರಮದ ನಡುವೆಯೇ ಜರುಗಿದ ಬೆಳಗಾವಿ ಅಧಿವೇಶನ ಇಂದು ಮುಕ್ತಾಯವಾಯಿತು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸದನದ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
16ನೇ ವಿಧಾನಸಭೆಯ 2ನೇ ಅಧಿವೇಶನ ಡಿ.4ರಂದು ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಪ್ರಾರಂಭವಾಗಿ ಡಿ.15ವರೆಗೆ ನಡೆಯಿತು. ಈ ಅಧಿವೇಶನದಲ್ಲಿ ಸುಮಾರು 66 ಗಂಟೆಗಳಿಗೂ ಹೆಚ್ಚು ಕಾರ್ಯಕಲಾಪ ನಡೆದಿದೆ. 2023-24ನೇ ಸಾಲಿನ ಪೂರಕ ಅಂದಾಜು, 2023-24ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ, ಧನವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 17 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಖಾದರ್ ಸುವರ್ಣಸೌಧದಲ್ಲಿಂದು ತಿಳಿಸಿದರು.
ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕೃತ ನಿರ್ಣಯ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬೆಳಗಾವಿಗೆ ಆಗಮಿಸಿದ ಶತಮಾನೋತ್ಸವದ ಸಂಭ್ರಮದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು ಖಾಸಗಿ ಸದಸ್ಯರ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.
ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ, ಸಾರ್ವಜನಿಕ ಉದ್ಯಮಗಳ ಸಮಿತಿಯ 136ನೇ ವರದಿ, ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24ನೇ ಸಾಲಿನ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 9 ಅಧಿಸೂಚನೆಗಳು, 3 ಅಧ್ಯಾದೇಶಗಳು ಮತ್ತು 61 ವಾರ್ಷಿಕ ವರದಿಗಳು, 105 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 1 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.
ನಿಯಮ 60 ರಡಿಯಲ್ಲಿ ನೀಡಿದ್ದ 4 ಸೂಚನೆಗಳ ಪೈಕಿ 3 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಒಟ್ಟು 5 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಾಲ್ಕು ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸಭಾಧ್ಯಕ್ಷರಿಗೆ ಸದನವು ಅಧಿಕಾರ ನೀಡಲಾಗಿದೆ.
ಒಟ್ಟು 3038 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 148 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2206 ಪ್ರಶ್ನೆಗಳ ಪೈಕಿ 2010 ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ. ನಿಯಮ 351 ರಡಿಯಲ್ಲಿ 200 ಸೂಚನೆಗಳನ್ನು ಅಂಗೀಕರಿಸಿದ್ದು, 110 ಸೂಚನೆಗಳ ಉತ್ತರಗಳನ್ನು ನೀಡಲಾಗಿದೆ. ಗಮನ ಸೆಳೆಯುವ 174 ಸೂಚನೆಗಳ ಪೈಕಿ 140 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ 197 ಸೂಚನೆಗಳಿಗೆ ಉತ್ತರವನ್ನು ನೀಡಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 31 ಸೂಚನೆಗಳನ್ನು ಚರ್ಚಿಸಲಾಗಿದೆ. 18 ಅರ್ಜಿಗಳನ್ನು ಒಪ್ಪಿಸಲಾಗಿದೆ ಎಂದು ಯು ಟಿ ಖಾದರ್ ತಿಳಿಸಿದರು.