ಬೆಂಗಳೂರು:ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಕಲಾಪ ಸದನದ ಪೂರ್ವತಯಾರಿಯನ್ನು ಪರಿಶೀಲಿಸಿದರು.
ಪೂರ್ವ ತಯಾರಿ ಪರಿಶೀಲಿಸಿದ ಸ್ಪೀಕರ್ ಕಾಗೇರಿ ನಾಳೆಯಿಂದ ಡಿ.15ರ ವರೆಗೆ ಏಳು ದಿನಗಳ ಕಾಲ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಕಳೆದ ಬಾರಿಯಂತೆ ಈ ಸಲವೂ ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಅಧಿವೇಶನ ನಡೆಯಲಿದೆ. ಶಾಸಕರು ಕೂರುವ ಟೇಬಲ್ ಹಾಗೂ ಕುರ್ಚಿ ಮಧ್ಯೆ ಪ್ಲಾಸ್ಟಿಕ್ ಶೀಟನ್ನು ಅಳವಡಿಸಲಾಗಿದೆ. ಕಳೆದ ಬಾರಿಯಂತೆಯೇ ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತಿದೆ. ಈ ಸಂಬಂಧ ಸ್ಪೀಕರ್ ಕಾಗೇರಿ ಕಲಾಪ ಸಭಾಂಗಣಕ್ಕೆ ಭೇಟಿ ನೀಡಿ, ಕೋವಿಡ್ ಮುಂಜಾಗ್ರತಾ ಕ್ರಮ, ಪೂರ್ವ ತಯಾರಿಗಳ ಪರಿಶೀಲನೆ ನಡೆಸಿದರು. ಕಳೆದ ಬಾರಿಯಂತೆಯೇ ಈ ಬಾರಿಯೂ ಮಾಧ್ಯಮದವರಿಗೆ ವೀಕ್ಷಕರ ಗ್ಯಾಲರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಕಲಾಪ ವೀಕ್ಷಣೆಗೆ ಅವಕಾಶ ಇಲ್ಲ. ಅಧಿಕಾರಿಗಳು ನಿಯಮಿತ ಸಂಖ್ಯೆಯಲ್ಲಿ ಮಾತ್ರ ಸದನದೊಳಗೆ ಹೋಗಲು ಅವಕಾಶ ಇದೆ.ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೋವಿಡ್ ಟೆಸ್ಟ್:ಈ ಬಾರಿಯೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕಲಾಪದಲ್ಲಿ ಪಾಲ್ಗೊಳ್ಳುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಕೋವಿಡ್ 19 ಟೆಸ್ಟ್ ಮಾಡಿಸಬೇಕು. ಆದರೆ ಈ ಬಾರಿ ಮಾಧ್ಯಮದವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ನಿಂದ ವಿನಾಯ್ತಿ ನೀಡಲಾಗಿದೆ.ಇನ್ನು ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದರೆ ಕೋವಿಡ್ ಟೆಸ್ಟ್ ಮಾಡಿಸಬೇಕು. ನಾಳೆಯಿಂದ ಡಿ.15ರ ರವರೆಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರೀಕ್ಷಾ ಕೇಂದ್ರ ಕಾರ್ಯನಿರ್ವಹಿಸಲಿದೆ.