ಬೆಂಗಳೂರು: "ಅಧಿಕಾರದಲ್ಲಿರುವವರು ಭಾರತೀಯ ಸಂವಿಧಾನಕ್ಕೆ ವಿರುದ್ಧವಾದ ಬೇರೆ ದಾರಿಯಲ್ಲಿ ರಾಷ್ಟ್ರವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಕಂಡಿರದ ಬೆದರಿಕೆಯನ್ನು ಜನರೀಗ ಅನುಭವಿಸುತ್ತಿದ್ದಾರೆ" ಎಂದು ನವದೆಹಲಿಯ ಕೇಂದ್ರ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಸಂಜೋಯ್ ಸಿಂಘಾ ಟೀಕಿಸಿದರು. ಗಾಂಧಿ ಭವನದಲ್ಲಿ ಶನಿವಾರ ನಡೆದ 2 ದಿನಗಳ ದಕ್ಷಿಣ ವಲಯ ಗಾಂಧಿ ಸ್ಮಾರಕ ನಿಧಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳು ಧ್ರುವೀಕರಣಗೊಂಡಿವೆ. ಶ್ರೀಸಾಮಾನ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಕಾರ್ಯನಿರ್ವಹಿಸಲು ಸಂಸ್ಥೆಗಳಿಗೆ ಮುಕ್ತ ವಾತಾವರಣವಿಲ್ಲ. ಈಗ ಅಧಿಕಾರದಲ್ಲಿರುವ ಜನರು ನ್ಯಾಯಾಂಗವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ದೂರಿದರು.
ಗಾಂಧಿ ಚಿಂತನೆಗಳಿಂದ ಈ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ದೇಶ ಉಳಿಸುವ ಶಕ್ತಿ ಅದಕ್ಕಿದೆ. ಹೀಗಾಗಿ ಎಲ್ಲರನ್ನು ಒಗ್ಗೂಡಿಸುವ ಮತ್ತು ಹೊಸ ಪೀಳಿಗೆಯೊಂದಿಗೆ ಸಂಪರ್ಕ ಸಾಧಿಸುವಂತಹ ಚಳುವಳಿಯನ್ನು ನಿರ್ಮಿಸಲು ಎಲ್ಲ ಗಾಂಧಿವಾದಿಗಳಿಗೆ ಅವರು ಕರೆ ಕೊಟ್ಟರು.