ಕರ್ನಾಟಕ

karnataka

ETV Bharat / state

ಎಷ್ಟು ಬೇಗ ಮೋದಿ ಸರ್ಕಾರ ತೊಲಗುತ್ತದೋ, ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತದೆ: ಸಿದ್ದರಾಮಯ್ಯ - ಯುವ ಜನೋತ್ಸವ ಕಾರ್ಯಕ್ರಮ

ಜಗತ್ತಿನ ಬೇರೆ ಯಾವ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಇಲ್ಲ. ಇದನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಆಗಬೇಕಿದೆ. ದುರಾದೃಷ್ಟವಶಾತ್‌ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah
ಯುವ ಜನೋತ್ಸವ ಕಾರ್ಯಕ್ರಮ

By

Published : Jul 11, 2022, 3:24 PM IST

Updated : Jul 11, 2022, 3:45 PM IST

ಬೆಂಗಳೂರು: ಉದ್ಯೋಗ ಸೃಷ್ಟಿ ಕುರಿತು ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಬೆಂಗಳೂರಿನ ಅರಮನೆ ಮೈದಾನದ ನಾಲಪಾಡ್ ಪೆವಿಲಿಯನ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಅಧ್ಯಕ್ಷ ನಲಪಾಡ್, ರಾಜ್ಯ ಉಸ್ತುವಾರಿ ಕೃಷ್ಣ ಅಲ್ಲವರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಸಲೀಂ ಅಹಮದ್ ಮತ್ತಿತರರು ಹಾಜರಿದ್ದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಂದು ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವ ಜನರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 35 ವಯಸ್ಸಿನ ಒಳಗಿನ ಯುವಜನರ ಪ್ರಮಾಣ ಶೇ.65 ಇದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 107 ಕೋಟಿ ಜನರು ದುಡಿಯುವ ಶಕ್ತಿ ಹೊಂದಿದ್ದಾರೆ. ಆದರೆ ಇವರಲ್ಲಿ ಉದ್ಯೋಗ ಹೊಂದಿರುವ ಜನರ ಪ್ರಮಾಣ ಕೇವಲ 37- 38% ಇದೆ.

ಯುವಕರ ಶಕ್ತಿ ಸದುಪಯೋಗ ಆಗಿಲ್ಲ: ದೇಶದ ಯುವಕರ ಸರಾಸರಿ ವಯಸ್ಸು 28.3 ವರ್ಷ. ಜಗತ್ತಿನ ಬೇರೆ ಯಾವ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಇಲ್ಲ. ಇದನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಆಗಬೇಕಿದೆ. ದುರಾದೃಷ್ಟವಶಾತ್‌ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ. ದೇಶದ ಯುವಶಕ್ತಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ.

ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿ: ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ 7% ಮತ್ತು ನಗರ ಪ್ರದೇಶದಲ್ಲಿ 9% ಆಗಿದೆ. ಒಟ್ಟು ನಿರುದ್ಯೋಗ 8% ಇದೆ. ಇಷ್ಟು ಪ್ರಮಾಣದ ನಿರುದ್ಯೋಗ ಹಿಂದೆಂದೂ ಇರಲಿಲ್ಲ. ಹಾಗಾಗಿ ನಾವೆಲ್ಲರೂ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು. ಜಗತ್ತಿನ ಒಟ್ಟು 193 ದೇಶಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ 164 ಸ್ಥಾನದಲ್ಲಿ ಇದೆ ಎಂದು ಮೋದಿ ಅವರು ಹೇಳಿದ್ದಾರೆ. ಇದಕ್ಕೆ ಬಿಜೆಪಿಯ ಸುಬ್ರಮಣ್ಯಂಸ್ವಾಮಿ ಅವರು ಇಂದು ಟ್ವೀಟ್‌ ಮಾಡಿ, 2011 ರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ನಮ್ಮ ದೇಶ 3ನೇ ಸ್ಥಾನದಲ್ಲಿತ್ತು. ಮೋದಿ ಅವರು ಪ್ರಧಾನಿಯಾದ ಮೇಲೆ ಅದು 164ನೇ ಸ್ಥಾನಕ್ಕೆ ಕುಸಿದುಹೋಗಿದೆ ಎಂದಿದ್ದಾರೆ.

ಯುವ ಜನೋತ್ಸವ ಕಾರ್ಯಕ್ರಮ

ಮೋದಿಯಿಂದ ಯುವಕರಿಗೆ ಅನ್ಯಾಯ:ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಮೋದಿ ಅವರು ಹೇಳಿದ್ದರು. ಅವರು ಪ್ರಧಾನಿಯಾಗಿ 8 ವರ್ಷ ಆಗಿದೆ, ಈಗ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ನೋಟು ರದ್ದತಿ, ಕೊರೊನಾ, ಜಿಎಸ್‌ಟಿ ಜಾರಿಗೆ ಮೊದಲು ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ 10 ಕೋಟಿ ಉದ್ಯೋಗಗಳು ಇದ್ದವು. ಈಗದು 2.5 ಕೋಟಿಗೆ ಇಳಿದಿದೆ. ಇದಕ್ಕೆ ಹೊಣೆ ಯಾರು? ಯುವಕರಿಗೆ ದೊಡ್ಡ ಅನ್ಯಾಯ ಮಾಡಿದ್ದರೆ ಅದು ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಎಂದರು.

ಅಗ್ನಿಪಥ ಯೋಜನೆಗೆ ವಿರೋಧ: ಅಗ್ನಿಪಥ ಯೋಜನೆ ಜಾರಿಗೆ ತಂದು ಯುವಕರಿಗೆ ಕೇವಲ 4 ವರ್ಷ ಸೈನ್ಯದಲ್ಲಿ ಉದ್ಯೋಗ ನೀಡಲು ಹೊರಟಿದ್ದಾರೆ. ಈ ಅವಧಿ ಮುಗಿದ ಮೇಲೆ ಸೈನ್ಯದಲ್ಲಿ ಇದ್ದವರು ಏನು ಮಾಡಬೇಕು? 17 ವರ್ಷಕ್ಕೆ ಕೆಲಸಕ್ಕೆ ಸೇರಿದವರು 21 ವರ್ಷಕ್ಕೆ ನಿವೃತ್ತಿಯಾಗುತ್ತಾರೆ. ಆಮೇಲೆ ಆತ ಬದುಕಿರುವವರೆಗೆ ಏನು ಕೆಲಸ ಮಾಡಬೇಕು. ಶಿಕ್ಷಣವನ್ನೂ ಪೂರೈಸಿರುವುದಿಲ್ಲ, ಇತ್ತ ಉದ್ಯೋಗವೂ ಸಿಗುವುದಿಲ್ಲ. ಕೊನೆಗೆ ಯಾವ ದಾರಿ ಸಿಗದೆ ಯುವಕರು ತಪ್ಪು ದಾರಿ ಹಿಡಿಯುತ್ತಾರೆ.

ಯುವಕರ ಭವಿಷ್ಯಕ್ಕೆ ಕತ್ತರಿ: ಮೋದಿ ಅವರು ಮೈಸೂರು, ಬೆಂಗಳೂರಿಗೆ ಬಂದಾಗ ನಿರುದ್ಯೋಗ, ಬೆಲೆಯೇರಿಕೆ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ್ರಾ? ಇದನ್ನು ಯುವಜನರು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾವಂತ ಯುವಕರು ಕೆಲಸ ಕೇಳಿದರೆ ಪಕೋಡ ಮಾರೋಕೆ ಹೋಗಿ ಎನ್ನುತ್ತಾರೆ. ಇದಕ್ಕಿಂತ ನೋವಿನ ಸಂಗತಿ ಬೇರೆ ಇಲ್ಲ. ಒಮ್ಮೆ ಬಾದಾಮಿಯ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್​ನ ಹುಡುಗರು ನನ್ನ ಪರ ಘೋಷಣೆ ಕೂಗಿದರು. ಆ ನಂತರ ಬಿಜೆಪಿಯವರು ಒಟ್ಟು ಸೇರಿ ಮೋದಿ, ಮೋದಿ ಎಂದು ಕೂಗಿದರು. ಅದಕ್ಕೆ ನಾನು ಮೋದಿ ನಿಮ್ಮ ಮನೆ ಹಾಳು ಮಾಡಿ, ನಿಮ್ಮ ಭವಿಷ್ಯಕ್ಕೆ ಕತ್ತರಿ ಹಾಕಿದ್ದಾರೆ. ಯಾಕಪ್ಪ ಅವರ ಹೇಸರು ಕೂಗ್ತೀರ ಎಂದೆ. ಈಗ ಈ ರೀತಿ ಕೂಗುವವರ ಸಂಖ್ಯೆ ಕಡಿಮೆಯಾಗಿದೆ.

ಯುವ ಜನೋತ್ಸವ ಕಾರ್ಯಕ್ರಮ

ದೇಶದ ಆರ್ಥಿಕತೆ ಅಧೋಗತಿಗೆ: 1988ರಲ್ಲಿ ಚೀನಾ 100 ಕೋಟಿ ಜನಸಂಖ್ಯೆ ದಾಟಿತ್ತು. ನಾವು 100 ಕೋಟಿ ಆಗಿದ್ದು, 2000 ದಲ್ಲಿ. 1988ರಲ್ಲಿ ಚೀನಾದ ತಲಾ ಆದಾಯ 328 ಡಾಲರ್. ಆಗ ಭಾರತದ ತಲಾ ಆದಾಯ 355 ಡಾಲರ್ ಇತ್ತು. ಇಂದು ಚೀನಾದ ತಲಾ ಆದಾಯ 12,000 ಡಾಲರ್‌ ಆಗಿದೆ, ಭಾರತದ ತಲಾ ಆದಾಯ ಇಂದು 1877 ಡಾಲರ್‌ ಇದೆ. ಜನಸಂಖ್ಯೆ ನಮಗಿಂತ ಜಾಸ್ತಿ ಇರುವ ದೇಶದ ತಲಾ ಆದಾಯ ಹೆಚ್ಚಿದೆ. ಜನಸಂಖ್ಯೆ ಏರಿಕೆ ಆದಂತೆ ಚೀನಾದವರು ಅದನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದ್ದಾರೆ. ನಮ್ಮಲ್ಲಿ ಅಗಾಧವಾದ ಮಾನವ ಸಂಪತ್ತು ಇದ್ದರೂ ಕೂಡ ಅಭಿವೃದ್ಧಿ ಸಾಧ್ಯವಾಗಿಲ್ಲ. ಇದರಿಂದ ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆ ಎಂದು ವಿವರಿಸಿದರು.

ಅಪಾಯದಲ್ಲಿ ಪ್ರಜಾಪ್ರಭುತ್ವ: 2019ರಲ್ಲಿ ರೈಲ್ವೆ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಹಾಕಿದವರು 1 ಕೋಟಿ 26 ಲಕ್ಷ ಜನ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಮಾಸ್ಟರ್‌ ಡಿಗ್ರಿ, ಪಿಹೆಚ್‌ಡಿ ಆದವರು ಹೀಗೆ ಎಲ್ಲರೂ ಅರ್ಜಿ ಹಾಕಿದ್ದರು. ಒಂದು ಹುದ್ದೆಗೆ ಸರಾಸರಿ 350 ಜನ ಅರ್ಜಿ ಹಾಕಿದ್ದರು. ಇದರಿಂದ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎಂಬುದು ಅರ್ಥವಾಗುತ್ತೆ. ಇಂದು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಉಳಿಸುವ ಕೆಲಸ ಕಾಂಗ್ರೆಸ್‌ ನ ಜವಾಬ್ದಾರಿ. ಕಾರಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್​ನವರು ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬಿಜೆಪಿಯವರು ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು. ಸಾವರ್ಕರ್‌, ಗೋಲ್ವಾಲ್ಕರ್‌ ಮುಂತಾದವರು ಹಿಟ್ಲರ್‌ ನೀತಿಯನ್ನು ಹೊಗಳಿದ್ದಾರೆ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆಯಾ? ಇಂದು ಬೆಲೆಯೇರಿಕೆ ಗಗನಕ್ಕೆ ಮುಟ್ಟಿದೆ. ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಅವಧಿಯಲ್ಲಿ ಗ್ಯಾಸ್‌ ಬೆಲೆ 414 ರೂಪಾಯಿ, ಡೀಸೆಲ್‌ ಬೆಲೆ 46 ಹಾಗೂ ಪೆಟ್ರೋಲ್‌ 68 ರೂಪಾಯಿ ಇತ್ತು.

ಇದನ್ನೂ ಓದಿ:ನಾಳೆಯಿಂದ ಎರಡು ದಿನ ಮಳೆ ಹಾನಿ ಜಿಲ್ಲೆಗಳಿಗೆ ಸಿಎಂ ಭೇಟಿ.. ಪರಿಹಾರ ವಿತರಣೆಗೆ ನಿರ್ದೇಶನ

ಇಂದು ಪೆಟ್ರೋಲ್‌ 113. ಡೀಸೆಲ್‌ 95 ಹಾಗೂ ಗ್ಯಾಸ್‌ ಬೆಲೆ 1,050 ರೂಪಾಯಿ ಆಗಿದೆ. ಹೀಗಾದರೆ ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತ ಜಾತಿಯ ಬಡವರು ಜೀವನ ಮಾಡೋಕೆ ಆಗುತ್ತಾ? ಎಷ್ಟು ಬೇಗ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ತೊಲಗುತ್ತದೆಯೋ ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತದೆ. ಯುವಕರ ಧ್ವನಿ ನಿಜವಾದ ಸಮಸ್ಯೆಗಳನ್ನು ಜನರಿಗೆ ತಲುಪಿಸುವತ್ತ, ಅನ್ಯಾಯಗಳ ವಿರುದ್ಧ ಇರಬೇಕು. ಈ ಕೆಲಸವನ್ನು ನಾವು ನೀವೆಲ್ಲ ಸೇರಿ ಮಾಡೋಣ ಎಂದರು.

Last Updated : Jul 11, 2022, 3:45 PM IST

ABOUT THE AUTHOR

...view details