ಬೆಂಗಳೂರು:ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಚಾಕುನಿಂದ ಇರಿದು ಕೊಲೆಗೈದಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಕೆಹೆಚ್‌ಬಿ ಕಾಲೋನಿ ನಿವಾಸಿ ಸಂತೋಷ್ (28) ಕೊಲೆಯಾದ ಮಗ. ಈ ಸಂಬಂಧ ಕೃತ್ಯ ಎಸಗಿದ ಆರೋಪಿ ತಂದೆ ಗುರುರಾಜ್ (58) ಎಂಬಾತನನ್ನು ಬಂಧಿಸಲಾಗಿದೆ. ಈತ ಮದ್ಯದ ಅಮಲಿನಲ್ಲಿ ಇರುವುದರಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿ ಚಾಕು ಇರಿತ:
ಗುರುರಾಜ್ ಕೆಹೆಚ್‌ಬಿ ಕಾಲೋನಿಯಲ್ಲಿ ಭಾರತಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಪುತ್ರ ಸಂತೋಷ್ ಮತ್ತು ಪತ್ನಿ ಕೂಡ ಜೊತೆಯಲ್ಲೇ ಡ್ರೈವಿಂಗ್ ಸ್ಕೂಲ್ ನಿರ್ವಹಿಸುತ್ತಿದ್ದರು. ಜೊತೆಗೆ ಆರ್‌ಟಿಒ ಏಜೆಂಟ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದ. ಈ ನಡುವೆ ಗುರುರಾಜ್ ಮದ್ಯದ ದಾಸನಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಂತೋಷ್ ವಾಹನವೊಂದರ ದಾಖಲೆ ಕುರಿತು ತಂದೆಗೆ ಪ್ರಶ್ನಿಸಿದ್ದಾನೆ. ಆಗ ಕಂಠಪೂರ್ತಿ ಮದ್ಯ ಸೇವಿಸಿದ್ದ ಗುರುರಾಜ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದರಿಂದ ಕೋಪಗೊಂಡ ಸಂತೋಷ್, ತಂದೆಯ ಮೊಬೈಲ್ ಕಸಿದು ಎಸೆದಿದ್ದಾನೆ.