ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತನಿಖಾಧಿಕಾರಿಗಳು ನೀಡಿದ ನೋಟಿಸ್ನಂತೆ ಮೂವರು ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ.
ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ ಬಳಿ ಎಸ್ಐಟಿ ವಿಚಾರಣೆಗೊಳಪಡಿಸಿದೆ. ಸಿಡಿಯಲ್ಲಿನ ವಾಯ್ಸ್ ಓವರ್ ಮೂವರ ಪೈಕಿ ಓರ್ವ ಆರೋಪಿ ನೀಡಿದ ಶಂಕೆ ಮೇರೆಗೆ ವಾಯ್ಸ್ ಸ್ಯಾಂಪಲ್ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೂರು ದಿನಗಳ ಹಿಂದೆ ಕಳುಹಿಸಲಾಗಿತ್ತು. ಇಂದು ಬರಲಿರುವ ವರದಿಯಲ್ಲಿ ವಿಡಿಯೋದಲ್ಲಿನ ಧ್ವನಿ ಸಾಮ್ಯತೆ ಕಂಡುಬಂದರೆ ಬಂಧಿಸುವ ಸಾಧ್ಯತೆ ದಟ್ಟವಾಗಲಿದೆ.
ಇದರ ಆಧಾರದ ಮೇಲೆ ಈತನ ಜೊತೆಯಲ್ಲಿದ್ದವರು ಯಾರು? ವಾಯ್ಸ್ ಓವರ್ ನೀಡಲು ಹೇಳಿದ್ದು ಯಾರು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಇನ್ನಿತರರನ್ನು ಎಸ್ಐಟಿ ಬಂಧಿಸುವ ಸಾಧ್ಯತೆಯಿದೆ.
ಕೇಸ್ಒಂದು, ಎರಡು ದಿಕ್ಕಿನಲ್ಲಿ ತನಿಖೆ :ಹಣಕ್ಕಾಗಿ ಹಾಗೂ ರಾಜಕೀಯವಾಗಿ ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸಿ ನನ್ನ ವಿರುದ್ಧ ನಕಲಿ ಸಿಡಿ ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ನೀಡಿರುವ ದೂರನ್ನು ಪರಿಗಣಿಸಿರುವ ಸದಾಶಿವನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಎಸ್ಐಟಿಗೆ ಕೇಸ್ ಹಸ್ತಾಂತರಿಸಿದ್ದಾರೆ. ಇದರ ಅನ್ವಯ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೆ ಸಿಡಿಯಲ್ಲಿರುವ ಯುವತಿ ಕೆಲಸ ಕೊಡಿಸುವುದಾಗಿ ನಂಬಿಸಿ ರಮೇಶ್ ಜಾರಕಿಹೊಳಿ ನನ್ನನ್ನು ಬಳಸಿಕೊಂಡಿದ್ದಾರೆ. ಸಿಡಿ ಮಾಡಿ ನನ್ನ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾಳೆ. ಈ ಆರೋಪವನ್ನು ಲಿಖಿತವಾಗಿ ಆಕೆ ದೂರು ನೀಡಬೇಕಾಗುತ್ತದೆ. ಒಂದು ವೇಳೆ ಜಾರಕಿಹೊಳಿ ವಿರುದ್ಧ ದೂರು ನೀಡಿದರೆ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ.
ಸುಳ್ಳು ಎಂದು ಸಾಬೀತಾದ್ರೆ ಯುವತಿ ಮೇಲೆ ಕೇಸ್:ಬಿಡುಗಡೆಯಾಗಿರುವ ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಿರುವ ಆಕೆ ಪೂರಕ ಮಾಹಿತಿ ಹಾಗೂ ಸಾಕ್ಷ್ಯಾಧಾರ ನೀಡಬೇಕಿದೆ. ಒಂದು ವೇಳೆ ಯುವತಿ ಹೇಳುತ್ತಿರುವುದು ಸುಳ್ಳು ಎಂದಾದರೆ ಹಾಗೂ ವಿಚಾರಣೆಗೆ ಹಾಜರಾಗಿರುವ ಆರೋಪಿಗಳು ಸಿಡಿ ಗ್ಯಾಂಗ್ನಲ್ಲಿ ಯುವತಿಯ ಪಾತ್ರ ಇರುವಿಕೆ ಬಗ್ಗೆ ಹೇಳಿಕೆ ನೀಡಿದರೆ ಯುವತಿ ವಿರುದ್ಧ ಎಫ್ಐಆರ್ ದಾಖಲಾಗಬಹುದು.
ಇನ್ನೊಂದೆಡೆ ಯುವತಿಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಪ್ರಮೀಳಾ ನಾಯ್ಡು ಪತ್ರ ಬರೆದಿದ್ದಾರೆ. ಜೊತೆಗೆ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಸಿಡಿ ಪ್ರಕರಣ: ಯುವತಿಯ ಅಜ್ಜಿ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ ಕಬ್ಬನ್ ಪಾರ್ಕ್ ಪೊಲೀಸರು!