ಕರ್ನಾಟಕ

karnataka

ETV Bharat / state

ಶಾಸಕ ಬಿ. ಸತ್ಯನಾರಾಯಣ ವಿಧಿವಶ: ತುಮಕೂರು ಜೆಡಿಎಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಬಿ. ಸತ್ಯನಾರಾಯಣ ಅವರು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 10.45 ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

sathyanarayana
ಸತ್ಯನಾರಾಯಣ

By

Published : Aug 5, 2020, 5:38 AM IST

Updated : Aug 5, 2020, 6:29 AM IST

ಬೆಂಗಳೂರು:ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ (69 ) ನಿಧನರಾಗಿದ್ದಾರೆ.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 10.45 ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಶಿರಾದ ಭುವನಹಳ್ಳಿ ಗ್ರಾಮದ ಅವರು, ಒಬ್ಬ ಪುತ್ರ, ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ನಾಳೆ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.

ಜೆಡಿಎಸ್ ನಿಂದ ಮೂರು ಬಾರಿ ಗೆದ್ದಿದ್ದ ಅವರು, ಎರಡು ಬಾರಿ ಸಚಿವರಾಗಿದ್ದರು. 2018ರಲ್ಲಿ ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷರಾಗಿದ್ದರು. 1983ರಿಂದ 89ರ ವರೆಗೆ ಶಿರಾ ಮಾರುಕಟ್ಟೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಹೊಂದಿದ್ದರು. ಆದರೆ, ಸಚಿವ ಸ್ಥಾನ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದರು. ಜೆಡಿಎಸ್ ನಾಯಕರು ಅವರ ಮನವೊಲಿಸಿದ್ದರು.

ಸತ್ಯನಾರಾಯಣ ನಡೆದು ಬಂದ ಹಾದಿ: ವಕೀಲರಾಗಿದ್ದ ಸತ್ಯನಾರಾಯಣ ಅವರು, 1996ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಜಯಗಳಿಸಿದ್ದರು. ಅಂದು ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಇದರ ಜೊತೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅವರು, 2004ರಲ್ಲಿ ಮತ್ತೆ ವಿಧಾನಸಭೆ ಪ್ರವೇಶ ಮಾಡಿದರು. ಧರ್ಮಸಿಂಗ್ ನೇತೃತ್ವದಲ್ಲಿ ರಚನೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008, 2013ರ ಚುನಾವಣೆಯಲ್ಲಿ ಸತತ ಸೋಲು ಅನುಭವಿಸಿದ್ದರು. 2018ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಗೊಂಡಿದ್ದರು. ಶಿರಾ ತಾಲೂಕಿನ ಸ್ವಗ್ರಾಮ ಭುವನಹಳ್ಳಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ ತುಮಕೂರಿನ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಂತಿಮ‌ ದರ್ಶನಕ್ಕೆ ಇಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಚ್‌.ಡಿ. ದೇವೇಗೌಡ ಸಂತಾಪ:

ಸತ್ಯನಾರಾಯಣ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಟ್ವಿಟ್ಟರ್​ನಲ್ಲಿ ಸಂತಾಪ ಸಂದೇಶ ಬರೆದುಕೊಂಡಿದ್ದಾರೆ.

ದೇವೇಗೌಡರ ಸಂತಾಪ ಟ್ವೀಟ್​

ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇಇಲ್ಲ. ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Last Updated : Aug 5, 2020, 6:29 AM IST

ABOUT THE AUTHOR

...view details