ಆನೇಕಲ್ (ಬೆಂಗಳೂರು ನಗರ):ಮನೆ ದರೋಡೆಗೆಂದು ಬಂದಿದ್ದ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಮನೆಯಲ್ಲಿ ಮಹಿಳೆಯೊಬ್ಬರೇ ಇರುವುದನ್ನು ಖಚಿತ ಪಡಿಸಿಕೊಂಡಿದ್ದ ದುಷ್ಕರ್ಮಿಗಳು 35 ವರ್ಷದ ಶ್ವೇತಾ ಎಂಬುವರನ್ನ ಹತ್ಯೆಗೈದು ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಒಂಟಿ ಮಹಿಳೆಯ ಬರ್ಬರ ಹತ್ಯೆ ಮಾಡಿ ಮನೆ ದೋಚಿದ ದುಷ್ಕರ್ಮಿಗಳು ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ದೀಪಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಒಂಟಿ ಮಹಿಳೆಯ ಕೊಲೆಯಿಂದಾಗಿ ಜನತೆ ಬೆಚ್ಚಿದ್ದಾರೆ. ಪತಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದು, ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಈ ಮಹಿಳೆ ಮಾತ್ರ ಇದ್ದಾಗ ಎಂಟ್ರಿ ಕೊಟ್ಟ ಗ್ಯಾಂಗ್, ಚಾಕುವಿನಿಂದ ಇರಿದು ಕೊಂದಿದೆ.
ಇದಾದ ಬಳಿಕ ಸ್ಥಳೀಯರು ಇಲ್ಲಿನ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೆ ಡಿವೈಎಸ್ಪಿ ಹೆಚ್ ಎಂ ಮಹದೇವ್ ಮತ್ತು ಇನ್ಸ್ಪೆಕ್ಟರ್ ಶೇಖರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.