ಕರ್ನಾಟಕ

karnataka

ETV Bharat / state

ಸಿಂದಗಿ ಉಪಚುನಾವಣೆ: ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಸಭೆ - sindagi by- election

ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಜತೆಗೆ ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಹ ಘೋಷಣೆಯಾಗಲಿದೆ. ಯಾವುದೇ ಸಂದರ್ಭದಲ್ಲಿಯೂ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಸಾಧ್ಯತೆ ಇರುವ ಹಿನ್ನೆಲೆ ಒಂದು ಸುತ್ತಿನ ಸಭೆ ನಡೆಸಿ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಲು ಕಾಂಗ್ರೆಸ್ ಮುಂದಾಗಿದೆ.

Congress meeting
ಡಿ.ಕೆ. ಶಿವಕುಮಾರ್

By

Published : Mar 6, 2021, 11:43 AM IST

ಬೆಂಗಳೂರು: ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಕಾಂಗ್ರೆಸ್ ಇಂದು ಮಹತ್ವದ ಸಭೆ ನಡೆಸಲಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಡಿ.ಕೆ. ಶಿವಕುಮಾರ್​ ಸಭೆ ನಡೆಸಲಿದ್ದಾರೆ. ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಜತೆಗೆ ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಹ ಘೋಷಣೆಯಾಗಲಿದೆ. ಯಾವುದೇ ಸಂದರ್ಭದಲ್ಲಿಯೂ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಸಾಧ್ಯತೆ ಇರುವ ಹಿನ್ನೆಲೆ ಒಂದು ಸುತ್ತಿನ ಸಭೆ ನಡೆಸಿ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಲು ಕಾಂಗ್ರೆಸ್ ಮುಂದಾಗಿದೆ.

ಪಕ್ಷದಲ್ಲಿಯೇ ಇರುವ ಸೂಕ್ತ ಅಭ್ಯರ್ಥಿಗೆ ಅವಕಾಶ ನೀಡುವುದೋ ಅಥವಾ ಹೊಸ ಅಭ್ಯರ್ಥಿಗೆ ಮಣೆ ಹಾಕುವುದೋ ಎಂಬ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. 1958ರಿಂದ 2018ರವರೆಗ ನಡೆದ ಒಟ್ಟು ಚುನಾವಣೆಗಳ ಪೈಕಿ 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ ಮೂರು ಹಾಗೂ ಜೆಡಿಎಸ್ ಒಂದು ಬಾರಿ ಗೆಲುವು ಸಾಧಿಸಿದೆ.

ಮನಗೂಳಿ ನಿಧನದ ಅನುಕಂಪದ ಅಲೆ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ತಿಳಿದಿಲ್ಲ. ಆದರೆ ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಉಪಚುನಾವಣೆಗೆ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದಾರೆ. ಹಿನ್ನೆಲೆ ಜೆಡಿಎಸ್​ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮನಗೂಳಿ ಅವರ ಪುತ್ರರಾದ ಮುಖಂಡ ಅಶೋಕ್ ಮನಗೂಳಿ ಹಾಗೂ ಸಿಂದಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ನಿರಾಸೆಗೆ ಒಳಗಾಗಿದ್ದಾರೆ. ತಂದೆಯ ಸ್ಥಾನಕ್ಕೆ ಜೆಡಿಎಸ್​ನಿಂದ ಸ್ಪರ್ಧಿಸುವ ಆಶಯ ಹೊಂದಿದ್ದ ಇವರಿಗೆ ಒಂದು ನಿಟ್ಟಿನಲ್ಲಿ ನಿರಾಶೆಯಾದರೂ, ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಅವಕಾಶಗಳು ಅರಸಿ ಬರುವ ನಿರೀಕ್ಷೆಯಿದೆ.

ಇಂದಿನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಈ ವಿಚಾರದ ಮೇಲೆ ಸ್ಥಳೀಯ ನಾಯಕರ ಜತೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಮನಗೂಳಿ ಪುತ್ರರಲ್ಲಿ ಒಬ್ಬರನ್ನು ಸೆಳೆದು ಅಭ್ಯರ್ಥಿ ಮಾಡುವ ಮುನ್ನವೇ ನಾವು ನಿರ್ಧಾರ ಕೈಗೊಳ್ಳಬೇಕು ಎಂಬ ಚಿಂತನೆ ನಡೆಸಿದ್ದಾರೆ. ಇದನ್ನೇ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

2018ರ ವಿಧಾಸಭೆ ಚುನಾವಣೆಯಲ್ಲಿ ಸಾಲಿ ಮಲ್ಲಣ್ಣ ನಿಂಗಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಶೇ. 14.22 ರಷ್ಟು ಅಂದರೆ 22,818 ಮತ ಪಡೆದಿದ್ದರು. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಭೂಸನೂರು ರಮೇಶ್ ಬಾಳಪ್ಪ ಬಿಜೆಪಿ ಅಭ್ಯರ್ಥಿಯಾಗಿ 9305 ಮತಗಳ ಅಂತರದಿಂದ ಸೋಲನುಭವಿಸಿದ್ದರು. 2013ರ ಚುನಾವಣೆಯಲ್ಲಿ ಎಂ.ಸಿ, ಮನಗೂಳಿ ವಿರುದ್ಧ ಭೂಸನೂರು ರಮೇಶ್ ಬಾಳಪ್ಪ ಗೆಲುವು ಸಾಧಿಸಿದ್ದರು. ಕೇವಲ 752 ಮತಗಳ ಅಂತರದ ಗೆಲುವು ಇದಾಗಿತ್ತು. ಆ ಬಾರಿ ಕಾಂಗ್ರೆಸ್​ನಿಂದ ಸುನಗರ್ ಶರಣಪ್ಪ ತಿಪ್ಪಣ್ಣ ಸ್ಪರ್ಧಿಸಿ 27,595 ಮತ ಪಡೆದಿದ್ದರು.

2008ರಲ್ಲಿ ಸಹ 20 ಸಾವಿರ ಮತ ಪಡೆದಿದ್ದ ಅವರು ತೃತೀಯ ಸ್ಥಾನ ಪಡೆದಿದ್ದರು. ಇಲ್ಲಿ ಬಿಜೆಪಿ ಪ್ರಬಲವಾಗಿದ್ದು, ಜೆಡಿಎಸ್ ಕೂಡ ಇತ್ತೀಚೆಗೆ ಬಲ ಹೆಚ್ಚಿಸಿಕೊಂಡಿದೆ. ಆಡಳಿತ ಪಕ್ಷವಾಗಿರುವ ಹಿನ್ನೆಲೆ ಬಿಜೆಪಿಗೆ ಒಂದಿಷ್ಟು ಅನುಕೂಲಗಳು ಲಭಿಸಲಿವೆ. ಹೀಗಾಗಿ ಮನಗೂಳಿ ಪುತ್ರರಲ್ಲಿ ಒಬ್ಬರನ್ನು ತಮ್ಮತ್ತ ಸೆಳೆದು ಅಭ್ಯರ್ಥಿ ಮಾಡಿ ಗೆಲ್ಲಿಸಲು ಕಾರ್ಯತಂತ್ರ ಹೆಣೆಯುವುದು ಕಾಂಗ್ರೆಸ್ ಆಶಯವಾಗಿದೆ. ಇದಕ್ಕೆ ಸ್ಥಳೀಯ ನಾಯಕರು ಎಷ್ಟು ಸಹಕಾರ ನೀಡಲಿದ್ದಾರೆ ಎನ್ನುವುದು ಇಂದಿನ ಸಭೆಯಲ್ಲಿ ತಿಳಿದು ಬರಲಿದೆ.

ಓದಿ:'ಸಿಂದಗಿ ಉಪಚುನಾವಣೆಗೆ ಬಿಜೆಪಿ ಸಿದ್ಧ'

ಬಿಜೆಪಿಯಿಂದ ರಮೇಶ್ ಭೂಸನೂರ್ ಅಭ್ಯರ್ಥಿಯಾದರೆ ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ್ ಜಿಗಜಿಣಗಿ ಅವರ ಸಂಪೂರ್ಣ ಬೆಂಬಲ ಸಿಗಲಿದೆ. ಇದರಿಂದ ಬಿಜೆಪಿ ಹೆಚ್ಚಿನ ಚಿಂತೆ ಮಾಡುವುದು ಅನುಮಾನ. ಅಲ್ಲದೇ 2008, 2013ರಲ್ಲಿ ಶಾಸಕರಾಗಿದ್ದವರು ರಮೇಶ್. ಇದರಿಂದ ಬಿಜೆಪಿಗೆ ಇದು ಸಾಕಷ್ಟು ನಿರೀಕ್ಷೆ ಉಳಿಸಿದೆ. ಇದೀಗ ನಿಜವಾದ ಸವಾಲು ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದು, ಈ ವರ್ಷವನ್ನು ಹೋರಾಟದ ವರ್ಷವಾಗಿ ಪರಿಗಣಿಸಿದೆ. ತಾನು ಸೋತ ಕ್ಷೇತ್ರಗಳನ್ನು ಇನ್ನಷ್ಟು ಪ್ರಮುಖವಾಗಿ ಪರಿಗಣಿಸುತ್ತಿದೆ.

ABOUT THE AUTHOR

...view details