ಬೆಂಗಳೂರು: ದೀಪಾವಳಿ ಹಬ್ಬದ ಸಮಯ ಪಟಾಕಿ ಅನಾಹುತಗಳು ಹೆಚ್ಚಾಗುತ್ತಿದ್ದವು. ಆದರೆ ಈ ಕುರಿತು ಶಾಲಾ ಕಾಲೇಜಿನ ಹಂತದಲ್ಲೇ ಅರಿವು ಮೂಡಿಸುತ್ತಾ ಬಂದಿರುವ ಕಾರಣ ಈ ಬಾರಿಯ ದೀಪಾವಳಿಯಲ್ಲೂ ಪಟಾಕಿಯಿಂದಾಗುವ ಕಹಿ ಘಟನೆಗಳು ಕಡಿಮೆಯಾಗಿವೆ.
ಮೂರು ದಿನಗಳ ದೀಪಾವಳಿ ಹಬ್ಬ ಮುಗಿದಿದ್ದು, ಸಾಮಾನ್ಯವಾಗಿ ಗಲ್ಲಿ ಗಲ್ಲಿಗಳಲ್ಲಿ ಪಟಾಕಿ ಹೊಡೆಯುವ ಸ್ಪರ್ಧೆಯೇ ಇರುತ್ತಿತ್ತು. ಆದರೆ ಈ ಬಾರಿ ಕೋವಿಡ್ ಅದಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಸರ್ಕಾರ ಹಸಿರು ಪಟಾಕಿ ಕಡ್ಡಾಯ ಮಾಡಿದ್ದು, ಪರಿಸರದ ಕಾಳಜಿ ಜೊತೆ ಕೋವಿಡ್ ಕಾರಣಕ್ಕೆ ಪೋಷಕರು ಮಕ್ಕಳನ್ನು ಹೊರಗೆ ಬಿಡೋದಕ್ಕೆ ಹಿಂದು-ಮುಂದು ನೋಡುವಂತಾಗಿತ್ತು. ಇದೇ ಕಾರಣದಿಂದಾಗಿ ಪಟಾಕಿಯಿಂದ ಸಂಭವಿಸುತ್ತಿದ್ದ ಅನಾಹುತಗಳು ಕಡಿಮೆಯಾಗಿವೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ಮಿಂಟೋ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಕಲ್ಪನಾ ಮಾತನಾಡಿದ್ದು, ಕೋವಿಡ್ ಪಿಡುಗಿನಿಂದಾಗಿ ಒಳರೋಗಿಗಳಿಗೆ ಅಂತರ ಕಾಪಾಡಲು ಪ್ರತ್ಯೇಕ ಕೊಠಡಿ ಸ್ಥಾಪಿಸಲಾಗಿತ್ತು. 2 ಮೀಟರ್ ಅಂತರದಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಱಪಿಡ್ ಟೆಸ್ಟ್ ಮಾಡಿಸಿ ತೀವ್ರ ಕಣ್ಣಿನ ಗಾಯಾಳುಗಳಿಗೆ ಚಿಕಿತ್ಸೆ ಶೀಘ್ರದಲ್ಲಿಯೇ ನೀಡಲು ನಿರ್ಧರಿಸಿದ್ದೆವು ಎಂದು ಮಾಹಿತಿ ನೀಡಿದರು.