ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಶಾಸಕರಿಗೆ ದೂರವಾಣಿ ಕರೆ ಹೋಗಿದ್ದು, ಸಂಪುಟ ರಚನೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಪುತ್ರ ವಿಜಯೇಂದ್ರ ಬಿಎಸ್ವೈ ಜೊತೆ ಸುದೀರ್ಘ ಸಭೆ ನಡೆಸುತ್ತಿದ್ದಾರೆ.
ನೂತನ ಸಚಿವರ ಪಟ್ಟಿಯೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ನಿವಾಸ ಕಾವೇರಿಯಲ್ಲಿ ಕೆಲ ಆಪ್ತರ ಜೊತೆ ಸಮಾಲೋಚನೆ ನಡೆಸಿದರು. ಸಂಪುಟ ರಚನೆ ಬೆಳವಣಿಗೆ ಕುರಿತು ಚರ್ಚಿಸಿದರು.
ಅದರ ನಂತರ ಪುತ್ರ ಬಿ.ವೈ ವಿಜಯೇಂದ್ರ ಕಾವೇರಿಗೆ ಭೇಟಿ ನೀಡಿದ್ದು, ಬಿಎಸ್ವೈ ಜೊತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಸಂಪುಟದಲ್ಲಿ ಸ್ಥಾನಮಾನ ನೀಡುವ ಕುರಿತು ಹೈಕಮಾಂಡ್ ಕೈಗೊಂಡ ನಿರ್ಧಾರದ ಬಗ್ಗೆ ಚರ್ಚಿಸಿದರು. ಸಚಿವ ಸ್ಥಾನ ಅದರಲ್ಲಿಯೂ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ವಿಜಯೇಂದ್ರ ಸದ್ಯ ಹೈಕಮಾಂಡ್ ನಿಲುವಿನ ಕುರಿತು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ : ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ
ಇನ್ನು ಗೋವಿಂದ ಕಾರಜೋಳ, ಕೆ.ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ, ಸುಧಾಕರ್, ಬಿ.ಸಿ ಪಾಟೀಲ್, ಬಿ.ಶ್ರೀರಾಮುಲು, ಶಂಕರ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಆಕಾಂಕ್ಷಿಗಳಿಗೆ ದೂರವಾಣಿ ಕರೆ ಹೋಗಿದ್ದು, ಪಟ್ಟಿ 11-11.30 ರ ವೇಳೆಗೆ ಬಿಡುಗಡೆಯಾಗಲಿದ್ದು, ಯಾರಿಗೆಲ್ಲಾ ಅವಕಾಶ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.