ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹಾಲಿ ಹೈಕೋರ್ಟ್ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹಗರಣದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿ ಇದ್ದರೂ ಅವರಿಗೆ ಶಿಕ್ಷೆ ವಿಧಿಸಬೇಕು. ಜೊತೆಗೆ ಯಾವ ಮಂತ್ರಿಗಳ ಮೇಲೆ ಆರೋಪವಿದೆಯೋ ಕೂಡಲೆ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ಕುರಿತು ಕೆಲವು ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ನಾವು ಆಗಲೂ ಸಿಐಡಿ ತನಿಖೆ ವಿರೋಧಿಸಿದ್ದೆವು.
ಇದಕ್ಕೆ ಮುಖ್ಯ ಕಾರಣ ಈ ಪ್ರಕರಣದಲ್ಲಿ ಸರ್ಕಾರದಲ್ಲಿರುವ ಪ್ರಬಲ ವ್ಯಕ್ತಿಗಳು ಭಾಗಿಯಾಗಿರುವುದು. ಅವರನ್ನು ಧೈರ್ಯವಾಗಿ ವಿಚಾರಣೆ ನಡೆಸಿ ಬಂಧಿಸುವ ತಾಕತ್ತು ಸಿಐಡಿಗೆ ಇಲ್ಲ. ಹಾಗಾಗಿ, ಈ ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೆವು. ಈ ಕುರಿತು ಕಳೆದ ಅಧಿವೇಶನದಲ್ಲೂ ಆಗ್ರಹಿಸಿದ್ದೆವು. ಆದರೆ, ಸರ್ಕಾರಕ್ಕೆ ಒಳಗೊಳಗೆ ಭಯವಿದ್ದ ಕಾರಣಕ್ಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಐಡಿಗೆ ತಿಮಿಂಗಿಲಗಳನ್ನು ಹಿಡಿಯುವ ಶಕ್ತಿ ಇಲ್ಲ:ಪ್ರಬಲ ತಿಮಿಂಗಿಲಗಳನ್ನು ಹಿಡಿದು ತನಿಖೆ ನಡೆಸುವ ಶಕ್ತಿ ಸಿಐಡಿಗೆ ಇಲ್ಲ ಎಂದು ನಾವು ಹೇಳಿದ್ದ ಮಾತಿನಂತೆಯೇ ಈಗ ಈ ತನಿಖಾ ಸಂಸ್ಥೆಯು ನಡೆದುಕೊಳ್ಳುತ್ತಿದೆ. ಇಷ್ಟು ದಿನವಾದರೂ ಸಹ ಒಬ್ಬನೆ ಒಬ್ಬ ಪ್ರಭಾವಿಯನ್ನು ಅಥವಾ ವಿಧಾನಸೌಧದಲ್ಲಿ ಕುಳಿತವರನ್ನು ತನಿಖೆಗೆ ಒಳಪಡಿಸಿಲ್ಲ. ಜನರ ಕಣ್ಣ ಮುಂದೆಯೇ ಹಲವಾರು ಸಾಕ್ಷಿಗಳಿದ್ದರೂ, ಜನರೇ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿಲ್ಲ.
ಇದನ್ನು ನೋಡಿದರೆ ಇಡೀ ಹಗರಣವನ್ನು ನಿಧಾನಕ್ಕೆ ಕತ್ತು ಹಿಸುಕಿ ಮೂಲೆಗೆ ಎಸೆಯುವ ಹುನ್ನಾರ ಕಾಣಿಸುತ್ತಿದೆ. ಸರ್ಕಾರ ಆರಂಭದಿಂದಲೂ ನೇಮಕಾತಿಯಲ್ಲಿ ಹಗರಣಗಳೇ ನಡೆದಿಲ್ಲವೆಂದು ಪ್ರತಿಪಾದಿಸುವ ಕೆಲಸ ಮಾಡಿತು. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಲೋಪ ನಡೆದಿಲ್ಲ, ಹಗರಣ ಕೂಡ ನಡೆದಿಲ್ಲ ಎಂದು ವಿಧಾನಸಭಾ ಅಧಿವೇಶನದಲ್ಲೇ ಸುಳ್ಳು ಹೇಳಿದರು. ತನಿಖೆಯನ್ನು ಸಿಐಡಿಗೆ ವಹಿಸುವುದು ನಿಮಗೂ ಅನಿವಾರ್ಯ ಆಗುವಷ್ಟು ಸಾಕ್ಷ್ಯಗಳು ಬಹಿರಂಗಗೊಂಡವು. ಹಾಗಾಗಿ, ತನಿಖೆಗೆ ವಹಿಸಿದಿರಿ. ಆದರೆ ಇದುವರೆಗೆ ಸಿಐಡಿ ತನಿಖೆಯಿಂದ ಸಾಧಿಸಿದ್ದಾದರೂ ಏನು? ಎಂದು ಪ್ರಶ್ನಿಸಿದರು.