ಬೆಂಗಳೂರು: ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೈಗೊಂಡಿದ್ದ ಪ್ರವಾಸ ಮುಂದೂಡಿಕೆಯಾಗಿದೆ. ಸೋನಿಯಾ ಗಾಂಧಿ ವಿರುದ್ಧ ಈಡಿ ವಿಚಾರಣೆ ಖಂಡಿಸಿ ಜುಲೈ 21ರಂದು ಕಾಂಗ್ರೆಸ್ ಪಕ್ಷ ರಾಜಭವನ ಮುತ್ತಿಗೆಗೆ ತೀರ್ಮಾನಿಸಿರುವ ಹಿನ್ನೆಲೆ ತಾತ್ಕಾಲಿಕವಾಗಿ ತಮ್ಮ ಪ್ರವಾಸವನ್ನ ಸಿದ್ದರಾಮಯ್ಯ ಮುಂದೂಡಿದ್ದಾರೆ.
ಪ್ರತಿಭಟನೆಯಲ್ಲಿ ಎಲ್ಲ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಹೋರಾಟದ ನೇತೃತ್ವ ವಹಿಸಲಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಈಗಲೂ ಸುರಿಯುತ್ತಲೇ ಇರುವ ಹಿನ್ನೆಲೆ ಕೊಂಚ ಮಳೆಯ ಪ್ರಮಾಣ ತಗ್ಗಿದ ನಂತರ ತೆರಳಲು ತೀರ್ಮಾನಿಸಿದ್ದಾರೆ.
ಬಾರಿ ಮಳೆಯಾಗುತ್ತಿರುವ ಸಂದರ್ಭ ಸಂತ್ರಸ್ತರನ್ನು ಭೇಟಿಯಾಗುವುದು ಹಾಗೂ ಅವರು ಇರುವ ಪ್ರದೇಶಕ್ಕೆ ತಲುಪುವುದು ಕಷ್ಟ ಸಾಧ್ಯವಾಗುವ ಹಿನ್ನೆಲೆ ತಮ್ಮ ಪ್ರವಾಸವನ್ನು ತಾತ್ಕಾಲಿಕವಾಗಿ ಸಿದ್ದರಾಮಯ್ಯ ಮುಂದೂಡಿದ್ದಾರೆ ಎನ್ನಲಾಗಿದೆ.
ಇಂದಿನಿಂದ ಮೂರು ದಿನದ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ:ಜು.19 ರಿಂದ 21 ರವರೆಗೆ ರಾಜ್ಯದ ವಿವಿಧ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮೂರು ದಿನದ ಪ್ರವಾಸವನ್ನು ಸಿದ್ದರಾಮಯ್ಯ ಹಮ್ಮಿಕೊಂಡಿದ್ದರು. ಆ ಪ್ರವಾಸ ಈಗ ಮುಂದೂಡಿಕೆಯಾಗಿದೆ. ನಿಗದಿಯಂತೆ ಪ್ರವಾಸ ನಡೆದಿದ್ದರೆ ಸಿದ್ದರಾಮಯ್ಯ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರವಾಸಕ್ಕೆ ಹೋಗಬೇಕಿತ್ತು.
ನಿನ್ನೆ ಕಾಂಗ್ರೆಸ್ ರಾಜ್ಯ ನಾಯಕರು ಬೆಂಗಳೂರು ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಎಲ್ಲ ರಾಜ್ಯ ನಾಯಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೆಂಗಳೂರಿನಲ್ಲಿಯೇ ಇರುವಂತೆ ಸೂಚಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ವಿರುದ್ಧ ನಡೆಯುತ್ತಿರುವ ಈಡಿ ವಿಚಾರಣೆಯನ್ನು ಖಂಡಿಸಿ ಯಶಸ್ವಿ ಹೋರಾಟ ಕೈಗೊಳ್ಳಲು ಪಕ್ಷದ ಹೈಕಮಾಂಡ್ ಸಹ ರಾಜ್ಯ ನಾಯಕರುಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಹೋರಾಟವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸಿದ್ದರಾಮಯ್ಯ ಪ್ರವಾಸವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರು ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ: ಸಚಿವ ಕಾರಜೋಳ