ಬೆಂಗಳೂರು:ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿನಿಂದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಇಂದಿನಿಂದ ಮೂರು ದಿನ ಪ್ರವಾಸ ಕೈಗೊಳ್ಳಲಿರುವ ಅವರು, ಬಾದಾಮಿ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನೆರೆಯಿಂದಾಗಿ ಆಗಿರುವ ನಷ್ಟದ ಅಂದಾಜು ಮಾಡುವ ಜತೆಗೆ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ.
ಇಂದಿನಿಂದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಬೆಳಗ್ಗೆ 8 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿರುವ ಸಿದ್ದರಾಮಯ್ಯ, ಹುಬ್ಬಳ್ಳಿ ತಲುಪಿ ಅಲ್ಲಿಂದ ಬೆಳಗ್ಗೆ 11ಕ್ಕೆ ಬಾದಾಮಿಗೆ ತೆರಳಿದ್ದಾರೆ. ಅಲ್ಲಿನ ಹಲವು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ನಂತರ ಸಂಜೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಆಗಸ್ಟ್ 20ರಂದು ಕೂಡ ಅಲ್ಲಿಯೇ ಇನ್ನಷ್ಟು ಭಾಗಗಳಿಗೆ ಭೇಟಿ ಕೊಟ್ಟು ಸಂತ್ರಸ್ತರ ಅಹವಾಲು ಸ್ವೀಕರಿಸಿ ಆ ರಾತ್ರಿಯೂ ಬಾದಾಮಿಯಲ್ಲೇ ಉಳಿಯಲಿದ್ದಾರೆ.
ಆಗಸ್ಟ್ 21ರಂದು ವಿವಿಧ ತಾಣಗಳಿಗೆ ಭೇಟಿ ಕೊಟ್ಟ ನಂತರ ಅಲ್ಲಿಂದ ಬೆಳಗಾವಿಗೆ ಆಗಮಿಸಿ ಸಂಜೆ 7.30ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ಸಂತ್ರಸ್ತವಾಗಿದ್ದು, ಸಿದ್ದರಾಮಯ್ಯ ಕೇವಲ ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಭೇಟಿ ಕೊಡುತ್ತಿರುವುದು ಸಾರ್ವಜನಿಕರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿ ಅಪಸ್ವರ ಕೇಳಿಬರುತ್ತಿದೆ.
ನೆರೆಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ಬಾಗಲಕೋಟೆ ಜಿಲ್ಲೆಯ ಇತರೆ ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡ ಸಾಕಷ್ಟು ಸಮಸ್ಯೆ ಆಗಿದೆ. ಆದರೆ ಸಿದ್ದರಾಮಯ್ಯ ಇತ್ತ ಬರುತ್ತಿಲ್ಲ. ಇಷ್ಟು ದಿನ ಬೇರೆ ಬೇರೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೂ ಸಂತ್ರಸ್ತರ ಅಹವಾಲು ಆಲಿಸಲು ಕಣ್ಣಿನ ಸಮಸ್ಯೆ ಮುಂದಿಟ್ಟಿದ್ದ ಸಿದ್ದರಾಮಯ್ಯ, ಇದೀಗ ಕೇವಲ ತಮ್ಮ ಕ್ಷೇತ್ರವನ್ನಷ್ಟೇ ಭೇಟಿ ಮಾಡಿ ತೆರಳುತ್ತಿರುವುದಕ್ಕೆ ಹಲವರಿಂದ ಬೇಸರ ವ್ಯಕ್ತವಾಗಿದೆ.