ಬೆಂಗಳೂರು: ಮೋದಿಯವರ ಸರ್ಕಾರ ಜನದ್ರೋಹಿಯಾದ ಮತ್ತು ದೇಶದ್ರೋಹಿಯೂ ಆದ ವಿದ್ಯುಚ್ಛಕ್ತಿ [ತಿದ್ದುಪಡಿ] ಕಾಯ್ದೆ-2022 ಯನ್ನು ಲೋಕಸಭೆಯಲ್ಲಿ ಮಂಡಿಸಿ, ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ವಿದ್ಯುತ್ ಕ್ಷೇತ್ರವು ನಮ್ಮ ಸಂವಿಧಾನದ 7ನೇ ಶೆಡ್ಯೂಲ್‍ನಲ್ಲಿ ಸಮವರ್ತಿ ಪಟ್ಟಿಯಲ್ಲಿರುವ ಕಾರಣದಿಂದ ಇದರಲ್ಲಿ ಯಾವುದೆ ತಿದ್ದುಪಡಿ ತರಬೇಕಾದರೆ ರಾಜ್ಯಗಳ ಸಹಮತಿ ಕಡ್ಡಾಯ ಕುರಿತು ಶಾಸನಸಭೆಗಳಲ್ಲಿ ಚರ್ಚೆ ನಡೆಯಬೇಕು.ಆದರೆ, ಕೇಂದ್ರ ಸರ್ಕಾರ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳಿಗೆ ಯಾವ ಮನ್ನಣೆಯನ್ನೂ ನೀಡದೆ ತಿದ್ದುಪಡಿ ತರಲು ಹೊರಟಿದೆ ಎಂದು ಹರಿಹಾಯ್ದರು.
ಇದುವರೆಗೆ ಕಡು ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದ ಇವರು ಈಗ ನಗರ, ಗ್ರಾಮೀಣ ಭಾಗದ ಮಧ್ಯಮ ವರ್ಗ, ಮೇಲು, ಮಧ್ಯಮವರ್ಗದವರ ಕುತ್ತಿಗೆಗೂ ನೇಣಿನ ಕುಣಿಕೆ ಬಿಗಿಗೊಳಿಸಲು ಹೊರಟಿದ್ದಾರೆ. ಇದರ ಭಾಗವಾಗಿಯೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಲು ಹೊರಟಿದೆ. ಜನರ ಕೈಗೆ ಪಾಲಿಸ್ಟರ್ ಧ್ವಜಗಳನ್ನು ಕೊಟ್ಟು ಅಂಬಾನಿ, ಅದಾನಿ ಮುಂತಾದವರ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ನಾನು ಹೇಳಿದ್ದು ಇದೇ ಕಾರಣಕ್ಕೆ ಎಂದರು.