ಕರ್ನಾಟಕ

karnataka

ETV Bharat / state

ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಕೇಂದ್ರಕ್ಕೆ ಸಿದ್ದರಾಮಯ್ಯ ಒತ್ತಾಯ

ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jun 30, 2022, 7:48 PM IST

Updated : Jun 30, 2022, 7:58 PM IST

ನವದೆಹಲಿ, ಬೆಂಗಳೂರು: ಚಂಡೀಘಡದಲ್ಲಿ ಬುಧವಾರ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಒತ್ತಾಯ ಮಾಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ದೆಹಲಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ದಿನಾಂಕಕ್ಕೆ ಜಿಎಸ್‌ಟಿ ಪರಿಹಾರ ನೀಡುತ್ತಿದ್ದುದು ಕೊನೆಯಾಗುತ್ತಿದೆ. ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂದು ಆ ನಷ್ಟ ಭರಿಸಿ ಕೊಡಲು 14% ಪರಿಹಾರ ನೀಡಬೇಕು ಎಂದು ಹಿಂದೆ ತೀರ್ಮಾನವಾಗಿತ್ತು. 2017ರ ಜುಲೈ 1ರಿಂದ ಇದು ಆರಂಭವಾಗಿತ್ತು. ನಾನು ಅನೇಕ ಬಾರಿ ಸದನದಲ್ಲಿ ಮತ್ತು ಹೊರಗಡೆ ಪರಿಹಾರ ಮುಂದುವರೆಸುವಂತೆ ಒತ್ತಾಯಿಸಿದ್ದೆ. ಜಿಎಸ್‌ಟಿ ಬರುವ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು. ಈಗ ಪರಿಹಾರ ಕೊಡುವುದನ್ನು ನಿಲ್ಲಿಸಿದ್ರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದನ್ನು 5 ವರ್ಷ ಮುಂದುವರೆಸಬೇಕಿದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಕೇಂದ್ರ ಸರ್ಕಾರದ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ಳುತ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಅದನ್ನು ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗಿಲ್ಲ. ಬಿಜೆಪಿಯೇತರ ರಾಜ್ಯಗಳು ಇದನ್ನು ಮುಂದುವರೆಸಬೇಕೆಂದು ಒತ್ತಾಯಿಸಿವೆ. ನಿನ್ನೆ ಕೂಡ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಜಿಎಸ್‌ಟಿ ಪರಿಹಾರ ನೀಡಲು ಸೆಸ್‌ ಹಾಕುತ್ತಿದ್ದಾರೆ. ಇದನ್ನು ಕೊಡೋದು ರಾಜ್ಯಗಳೇ. ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ವಸ್ತುಗಳ ಮೇಲೆ ಸೆಸ್‌ ಹಾಕಿ ಕೇಂದ್ರ ಸರ್ಕಾರವೇ ಹಣ ಸಂಗ್ರಹಿಸಿಕೊಳ್ಳುತ್ತದೆ. ಈ ಹಣದಲ್ಲಿ ಇಷ್ಟು ದಿನ ಪರಿಹಾರ ನೀಡುತ್ತಿದ್ದರು. 2026ರ ವರೆಗೆ ಸೆಸ್‌ ಸಂಗ್ರಹ ಮುಂದುವರೆದರೂ ರಾಜ್ಯಗಳಿಗೆ ಪಾಲು ಸಿಗಲ್ಲ. ಈ ರೀತಿ ಸೆಸ್‌ ಸಂಗ್ರಹ ಮಾಡಿದ್ರೂ ತೊಂದರೆಯಲ್ಲಿರುವ ರಾಜ್ಯಗಳಿಗೆ ಪರಿಹಾರ ನೀಡುತ್ತಿಲ್ಲ. ಇದಕ್ಕೆ ನನ್ನ ವಿರೋಧವಿದೆ ಎಂದರು.

ಇದನ್ನೂ ಓದಿ:ಶ್ರೇಷ್ಠ ತಾಂತ್ರಿಕ ವ್ಯವಸ್ಥೆ ರೂಪಿಸಿ: ಬಾಷ್ ಸಂಸ್ಥೆಗೆ ಸಿಎಂ ಬೊಮ್ಮಾಯಿ ಸಲಹೆ

ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ರೈತರು, ಜನ ಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್‌ ಮೆರಿನ್‌ ಪಂಪ್​ಗಳ ಮೇಲೆ ಇದ್ದ 12% ತೆರಿಗೆಯನ್ನು 15%ಗೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್‌ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು 12% ಇಂದ 18%ಗೆ ಏರಿಕೆ ಮಾಡಿದ್ದಾರೆ. ಸೋಲಾರ್‌ ಸಿಸ್ಟಂಗಳು, ಸೋಲಾರ್‌ ವಾಟರ್‌ ಹೀಟರ್​ಗಳ ಮೇಲೆ 5% ಇಂದ 12%ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಧಾನ್ಯಗಳನ್ನು ಸ್ವಚ್ಚ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲೆ ಇದ್ದ ತೆರಿಗೆ 12% ಇಂದ 18%ಗೆ ಏರಿದೆ. ಇಟ್ಟಿಗೆ ಮಾಡುವ ಜಾಗ್‌ ವರ್ಕ್ ಗಳ ಮೇಲಿನ ತೆರಿಗೆಯನ್ನು 5% ಇಂದ 12%ಗೆ ಹೆಚ್ಚಿಸಿದ್ದಾರೆ. ಎಲ್‌ಇಡಿ ಬಲ್ಬ್‌ ಮತ್ತು ಸಂಬಂಧಿತ ವಸ್ತುಗಳ ಮೇಲೆ 12% ಇಂದ 18% ಗೆ ಏರಿಸಲಾಗಿದೆ. ಬರೆಯುವ ಮತ್ತು ಮುದ್ರಿಸುವ ಇಂಕ್​ಗಳ ಮೇಲಿನ ತೆರಿಗೆಯನ್ನು 12% ಇಂದ 18%ಗೆ ಹೆಚ್ಚಿಸಲಾಗಿದೆ. ಶಿಕ್ಷಣದ ಉದ್ದೇಶಕ್ಕೆ ಬಳಸುವ ಚಾರ್ಟ್​​ಗಳು, ಗ್ಲೋಬ್‌ ಮಾದರಿಗಳಿಗೆ ಈವರೆಗೆ ತೆರಿಗೆ ವಿನಾಯಿತಿ ಇತ್ತು. ಅದನ್ನು 12%ಗೆ ಏರಿಕೆ ಮಾಡಿದ್ದಾರೆ. ಬ್ಯಾಂಕುಗಳ ಚೆಕ್‌ ಬುಕ್‌ ಮೇಲೆ ತೆರಿಗೆ ಇರಲಿಲ್ಲ, ಈಗ 18% ತೆರಿಗೆ ಹಾಕಿದ್ದಾರೆ. ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

Last Updated : Jun 30, 2022, 7:58 PM IST

ABOUT THE AUTHOR

...view details