ಬೆಂಗಳೂರು: ರಾಜ್ಯ ಪಿಯುಸಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಮುಗಿದು ಎರಡು ತಿಂಗಳುಗಳಾದರೂ ನೇಮಕ ಪತ್ರ ನೀಡದಿರುವುದನ್ನ ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದಿದ್ದಾರೆ.
ಆಯ್ಕೆಯಾಗಿರುವ ಎಲ್ಲ 1,203 ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಪತ್ರ ನೀಡಬೇಕು. ಸರ್ಕಾರದ ಯಾವುದೇ ನೇಮಕಾತಿ ಪ್ರಕ್ರಿಯೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ಒಂದು ವರ್ಷದೂಳಗೆ ನೇಮಕಾತಿ ಆದೇಶ ನೀಡಬೇಕು ಎಂದು ಕರ್ನಾಟಕ ಸರ್ಕಾರದ ಅಧಿಕೃತ ಆದೇಶವಿದೆ. ಆದರೂ ಆಯ್ಕೆ ಆದ ಈ ಉಪನ್ಯಾಸಕರುಗಳಿಗೆ ನೇಮಕ ಆದೇಶ ನೀಡದಿರುವುದು ಸರ್ಕಾರಿ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಈ ನೇಮಕಾತಿ ಪ್ರಕ್ರಿಯೆಯ ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರುಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಮಂಜೂರು ಮಾಡಿ:
ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಭೂಮಿ ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಮದುರ್ಗ ತಾಲೂಕಿನ ಓಬಳಾಪುರದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಲಂಬಾಣಿ ಸಮುದಾಯದ ಜನರು ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಹ ಸಲ್ಲಿಸಿದ್ದಾರೆ. ಆದರೆ ಅರ್ಜಿಗಳು ಇನ್ನೂ ಸಮರ್ಪಕವಾಗಿ ವಿಲೆವಾರಿ ಆಗಿಲ್ಲ. ಆದರೆ, ಈ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರಿಗೆ ಅರಣ್ಯ ಇಲಾಖೆಯವರು ತೀವ್ರ ರೀತಿಯ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದು ವಿವರಿಸಿದ್ದಾರೆ.
ಇದೇ ರೀತಿಯ ಸಮಸ್ಯೆ ರಾಜ್ಯಾದ್ಯಂತ ಇರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಕಂದಾಯ ಗ್ರಾಮಗಳ ರಚನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಈ ಸಮಸ್ಯೆಗಳು ಎಲ್ಲ ಕಡೆ ಉದ್ಭವಿಸುತ್ತಿವೆ. ಆದ್ದರಿಂದ ಕೂಡಲೇ ಈ ಕುರಿತು ಪರಿಶೀಲಿಸಿ ಅಸಹಾಯಕ ಜನರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಭೂಮಿಯನ್ನು ಮಂಜೂರು ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಸ್ಪೀಕರ್ಗೆ ಪತ್ರ:ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ಕೇಳಿದ್ದ 969 ಪ್ರಶ್ನೆಗಳಲ್ಲಿ 594ಕ್ಕೆ ಮಾತ್ರ ಉತ್ತರ ನೀಡಲಾಗಿದೆ. ಈ ಪ್ರಶ್ನೆಗಳೆಲ್ಲ ಸಾರ್ವಜನಿಕ ಮಹತ್ವದ್ದಾಗಿರುವುದರಿಂದ ಅವುಗಳಿಗೆ ಶೀಘ್ರವಾಗಿ ಉತ್ತರಗಳನ್ನು ಶಾಸಕರಿಗೆ ಕಳುಹಿಸಬೇಕು ಎಂದು ಸಭಾಧ್ಯಕ್ಷರಿಗೂ ಸಹ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಅಧಿವೇಶನ ಮುಗಿದು ಮೂರು ವಾರಗಳು ಆಗುತ್ತಾ ಬಂದರೂ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡದೇ ಇರುವುದು ಸರ್ಕಾರದ ಬೇಜವಾಬ್ದಾರಿಯುತ ನಡೆಯಾಗಿರುತ್ತದೆ. ಬಂದಿರುವ ಉತ್ತರಗಳೂ ಕೂಡ ಪೂರ್ಣ ಪ್ರಮಾಣದಲ್ಲಿಲ್ಲ. ಈ ಪ್ರಶ್ನೆಗಳೆಲ್ಲವೂ ಸಾರ್ವಜನಿಕವಾಗಿ ಮಹತ್ವದ್ದಾಗಿರುವುದರಿಂದ ಅತ್ಯಂತ ತುರ್ತಾಗಿ ಹಾಗೂ ಸಮರ್ಪಕವಾಗಿ ಉತ್ತರಗಳನ್ನು ಸಂಬಂಧಿಸಿದ ಶಾಸಕರುಗಳಿಗೆ ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲು ಕೋರಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.